`ಇದು ಅಭಯರ ಲಾಸ್ಟ್ ಕಂಬಳ’ ಎಂದು ಶೋಭಾ ಹೇಳಿದರೆ, `ಅಭಯರೆ ಮುಂದಿನ ಕಂಬಳಕ್ಕೂ ನನ್ನ ಕರೆಯಿರಿ’ ಎಂದ ಡೀವಿ !

 ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : “ಅಭಯರು ಕಂಬಳ ಓಡಿಸ್ತಾರೆ, ಇದು ಅವರ ಲಾಸ್ಟ್ ಕಂಬಳ” ಹೀಗಂತ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರೆ ಇತ್ತ ಪರಿವರ್ತನಾ ಯಾತ್ರೆ ಸಭೆಯಿಂದ ಅರ್ಧದಿಂದ ಎದ್ದು ಶ್ರೀರಾಮುಲು ಜತೆ ಒಂಟಿಕಟ್ಟೆ ಕಂಬಳಕ್ಕೆ ಭೇಟಿ ನೀಡಿ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವ ಡೀವಿ ಸದಾನಂದ ಗೌಡ “ಅಭಯಚಂದ್ರರೇ ಮುಂದಿನ ಕಂಬಳಕ್ಕೂ ನನ್ನನ್ನು ಕರೆಯಲು ಮರೆಯದಿರಿ” ಎಂದಿದ್ದಾರೆ. ಒಂದೇ ಪಕ್ಷದ ಇಬ್ಬರು ಪ್ರಭಾವಿ ನಾಯಕರು ಮೂಡುಬಿದಿರೆಯಲ್ಲಿ ಅಭಯಚಂದ್ರ ಬಗ್ಗೆ ಆಡಿದ ಮಾತು ಈಗ ಚರ್ಚೆಗೆ ಗ್ರಾಸವೊದಗಿಸಿದೆ.

“ಅಹಿಂಸೆಯ ನಾಡು ಜೈನಕಾಶಿಯಲ್ಲಿ ಅಭಯಚಂದ್ರ ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ. ಈ ಬಾರಿ ಅಭಯಚಂದ್ರರನ್ನು ಸೋಲಿಸಿ ಮೊದಲ ಬಾರಿಗೆ ಮೂಡುಬಿದಿರೆಯಲ್ಲಿ ಬಿಜೆಪಿ ಧ್ವಜ ಹಾರಿಸಬೇಕು” ಎಂದು ಶೋಭಾ ಕರಂದ್ಲಾಜೆ ಪರಿವರ್ತನಾ ಯಾತ್ರೆಯಲ್ಲಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಅಭಯಚಂದ್ರ ಮುಂದಿನ ಚುನಾವಣೆಯಲ್ಲಿ ಸೋಲಬೇಕು ಎಂದು ಶೋಭಾ ಹೇಳಿದರೆ ಅತ್ತ ಕಂಬಳದ ವೇದಿಕೆಯಲ್ಲಿ ಮಾತನಾಡಿದ ಡೀವಿ ಅವರು ಅಭಯಚಂದ್ರ ಮುಂದಿನ ವರ್ಷವೂ ಕಂಬಳ ನಡೆಸಬೇಕು ಎಂಬ ಆಶಯ ವ್ಯಕ್ತಪಡಿಸುವ ಮೂಲಕ ಅಭಯಚಂದ್ರರ ನಾಯಕತ್ವದ ಬಗ್ಗೆ ಬಿಜೆಪಿಗರೆ ದ್ವಂದ್ವ ಹೇಳಿಕೆ ನೀಡಿ ಕಾರ್ಯಕರ್ತರಲ್ಲಿ ಇರಿಸುಮುರಿಸು ಉಂಟು ಮಾಡಿದ್ದಾರೆ.

“ಹಾಗಾದರೆ ಮುಂದಿನ ವರ್ಷವೂ ಕಾಂಗ್ರೆಸ್ಸೇ ಕಂಬಳ ನಡೆಸುತ್ತದೆ, ಈ ಬಾರಿಯ ಚುನಾವಣೆಯಲ್ಲೂ ಬಿಜೆಪಿಗೆ ಸೋಲು ಎಂಬುದನ್ನು ಅವರು ಒಪ್ಪಿಕೊಂಡಂತಾಯಿತಲ್ಲವೇ” ಎಂಬ ಸಂದೇಶವೊಂದು ಭಾನುವಾರದಿಂದ ವಾಟ್ಸಪ್ಪಿನಲ್ಲಿ ಹರಿದಾಡತೊಡಗಿದೆ.