ಹೋರಿಹಬ್ಬ ನಿಷೇಧ ತೆರವಿಗೆ ಶಿವಮೊಗ್ಗ ಜನರ ಆಗ್ರಹ

ಶಿವಮೊಗ್ಗ : ತಮಿಳುನಾಡಿನಲ್ಲಿ ಜಲ್ಲಿಕಟ್ಟು ನಿಷೇಧ ವಿರುದ್ಧ ಬೃಹತ್ ಪ್ರತಿಭಟನೆ ನಂತರ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹೋರಿ ಕ್ರೀಡೆಗೆ ಸುಗ್ರೀವಾಜ್ಞೆ ಮೂಲಕ ಅನುವು ಮಾಡಿಕೊಡುತ್ತಿದ್ದಂತೆಯೇ,  ಇತ್ತ ಶಿವಮೊಗ್ಗದಲ್ಲಿ ಹೋರಿಹಬ್ಬದ ಮೇಲೆ ಹೇರಲಾಗಿರುವ ನಿಷೇಧ ತೆರವುಗೊಳಿಸುವಂತೆ ಅಲ್ಲಿನ ಜನರು ಆಗ್ರಹಿಸಿದ್ದಾರೆ.

ಹೋರಿಹಬ್ಬ ಅಭಿಮಾನಿ ಬಳಗದ ಸದಸ್ಯರು ಮೊನ್ನೆ ಶಿಕಾರಿಪುರದಲ್ಲಿ ಸಭೆ ಸೇರಿ ನಿಷೇಧ ತೆರವುಗೊಳುವಂತೆ ಒತ್ತಾಯಿಸಲು ನಿರ್ಣಯ ತೆಗೆದುಕೊಂಡರು.

ಕರ್ನಾಟಕ ಕರಾವಳಿ ಭಾಗದ ಕಂಬಳದ ಮೇಲಿನ ನಿಷೇಧ ತೆರವಿಗೆ ಮಾಜಿ ಸೀಎಂ ಯಡಿಯೂರಪ್ಪ ಬೆಂಬಲ ಸೂಚಿಸಿದ್ದರೂ, ತಮ್ಮ ಊರಲ್ಲೇ ನಡೆಯುತ್ತಿದ್ದ ಜನಪ್ರಿಯ ಹೋರಿಹಬ್ಬದ ಮೇಲಿನ ನಿಷೇಧದ ಬಗ್ಗೆ ಚಕಾರ ಏಕೆ ಎತ್ತುತ್ತಿಲ್ಲ ಎಂದು ಅಲ್ಲಿನ ಜನ ಕೇಳುತ್ತಾರೆ.

ಹೋರಿಹಬ್ಬದ ಮೇಲಿನ ನಿಷೇಧ ತೆರವು ಆಗ್ರಹಿಸಿ ಶಿಕಾರಿಪುರ, ಸೊರಬ ಮತ್ತು ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲು ಮತ್ತು ಸರ್ಕಾರಕ್ಕೆ ಮನವಿ ನೀಡಲು ಅಭಿಮಾನಿ ಬಳಗ ನಿರ್ಧರಿಸಿತು.

ಕಳೆದೆರಡು ವರ್ಷಗಳಿಂದ ಹೋರಿ ಹಬ್ಬ ಆಚರಣೆ ವಿರುದ್ಧ ನಿಷೇಧಾಜ್ಞೆ ಜಾರಿಯಲ್ಲಿತ್ತು.