ಅಚ್ಚಡದಲ್ಲಿ ಕೊಲೆಯಾದ ವ್ಯಕ್ತಿ ಶಿವಮೊಗ್ಗ ನಿವಾಸಿ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಕಟಪಾಡಿಯ ಅಚ್ಚಡದಲ್ಲಿ ಭೀಕರವಾಗಿ ಕೊಲೆಗೀಡಾದ ವ್ಯಕ್ತಿ ಮೂಲತಃ ಶಿವಮೊಗ್ಗ ಜಿಲ್ಲೆಯವ ಎಂದು ಪೊಲೀಸ್ ಮೂಲವೊಂದು ತಿಳಿಸಿದೆ.

ರವಿವಾರ ಬೆಳಿಗ್ಗೆ ಬಾವಿಕಟ್ಟೆಯ ಸಿಮೆಂಟ್ ಗಾರೆಗೆ ನೀರು ಚಿಮ್ಮಿಸಲು ಬಂದ ವ್ಯಕ್ತಿಯ ಕಣ್ಣಿಗೆ ಬಿದ್ದ ಈ ಶವವನ್ನು ಸ್ಥಳೀಯರು ಸಹಿತ ಹೊರ ಜಿಲ್ಲೆ-ರಾಜ್ಯದ ಕಾರ್ಮಿಕರು ಕೂಡಾ ಗುರುತಿಸುವಲ್ಲಿ ವಿಫಲರಾಗಿದ್ದರು. ಇದೀಗ ಮೃತ ವ್ಯಕ್ತಿ ಶಿವಮೊಗ್ಗ ಜಿಲ್ಲೆಯವನೆಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ವಿಳಾಸ ಪತ್ತೆಗೆ ಮುಂದಾಗಿದ್ದು,

ಮೃತರ ವಿಳಾಸ ಪತ್ತೆಯಾದಲ್ಲಿ ಕೊಲೆಗಡುಕರು ಸುಲಭವಾಗಿ ಪೊಲೀಸ್ ಬಲೆಗೆ ಬೀಳಬಹುದಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಕಾಮಗಾರಿ ಪ್ರಗತಿಯಲ್ಲಿದ್ದು, ಸುತ್ತಲೂ ಮನೆಗಳು ಹಾಗೂ ಆವರಣ ಗೋಡೆಗೆ ಗೇಟ್ ಬಂದೋಬಸ್ತ್ ಹೊಂದಿರುವ ಈ ಖಾಸಗಿ ಜಾಗದಲ್ಲಿ ಈ ಕೊಲೆಯಾಗಿದೆ ಎಂದಾದರೆ, ಇದೊಂದು ಪೂರ್ವಯೋಜಿತ ಕೊಲೆಯೇ, ಇಲ್ಲ ಮಾತಿಗೆ ಮಾತು ಬೆಳೆದು ಕುಡಿದ ಮತ್ತಿನಲ್ಲಿ ನಡೆದ ಆಕಸ್ಮಿಕ ಕೊಲೆಯೇ ಎನ್ನುವುದು ಪೊಲೀಸರ ತನಿಖೆಯಿಂದ ತಿಳಿದುಬರಬೇಕಾಗಿದೆ.

 

LEAVE A REPLY