ಶಿರಾಡಿ ಕಾಮಗಾರಿ ಮತ್ತಷ್ಟು ವಿಳಂಬ

ಮಂಗಳೂರು : ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್ ರಸ್ತೆಯ ಎರಡನೇ ಹಂತದ ಕಾಂಕ್ರಿಟ್ ಕಾಮಗಾರಿ ಜನವರಿ 1ರಿಂದ ಆರಂಭಗೊಳ್ಳಲಿದೆ. ಈ ಹಿಂದೆ ಡಿಸೆಂಬರ್ 1ರಿಂದ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಹೇಳಲಾಗಿದ್ದರೂ ಬಹುತೇಕ ಇದು ಪ್ರಾರಂಭಗೊಳ್ಳುವುದು ಕಷ್ಟ ಸಾಧ್ಯ ಎನ್ನಲಾಗುತ್ತಿದೆ. ಇನ್ನೂ ಕೆಲವು ವಾರಗಳ ಕಾಲ ಇದನ್ನು ಮುಂದೂಡುವ ಸಾಧ್ಯತೆ ಇದೆ.

ಶಿರಾಡಿಘಾಟ್ ರಸ್ತೆ ಕಾಮಗಾರಿಯನ್ನು ಆರಂಭಿಸುವ ಹಿನ್ನೆಲೆಯಲ್ಲಿ ಸರಕಾರ ಇತರ ಏಳು ಪರ್ಯಾಯ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕಾದ ಅಗತ್ಯವೂ ಇದೆ. ಶಿರಾಡಿಘಾಟ್ ರಸ್ತೆ ಕಾಮಗಾರಿ ಆರಂಭಗೊಂಡಲ್ಲಿ ಈ ರಸ್ತೆಯಲ್ಲಿ ಸಂಚಾರ ಕಷ್ಟ ಸಾಧ್ಯವಾಗಲಿದೆ.

ಕಾಮಗಾರಿಯನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಎಲ್ಲಾ ಸೂಚನೆ ನೀಡಲಾಗಿದ್ದರೂ ಗುತ್ತಿಗೆದಾರರು ಇನ್ನೂ ಕೂಡಾ ಇಲ್ಲಿ ಕಾಮಗಾರಿಗೆ ಬೇಕಾದ ಸಾಮಗ್ರಿಗಳನ್ನು ತಂದಿಟ್ಟಿಲ್ಲ. ನೋಟು ಅಮಾನ್ಯದಿಂದಾಗಿ ಹಾಗೂ ಮರಳಿನ ಅಭಾವದಿಂದಾಗಿ ಇಲ್ಲಿ ಯಾವುದೇ ಕಾಮಗಾರಿ ಸಾಮಾನು-ಸರಂಜಾಮು ಬಂದಿಲ್ಲ. ಇದೇ ವೇಳೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ಕಾಮಗಾರಿಯನ್ನು ನಿರ್ವಹಿಸಲು ಗುತ್ತಿಗೆಯನ್ನು ಪಡೆದುಕೊಂಡಿರುವ ಜಿವಿಆರ್ ಇನ್‍ಫ್ರಾಸ್ಟ್ರಕ್ಚರ್ ಸಂಸ್ಥೆಗೆ ಇನ್ನೂ ಕಾಮಗಾರಿಯನ್ನು ಏಕೆ ಆರಂಭಿಸಿಲ್ಲ ಎಂದು ಕಾರಣ ಕೇಳಿದೆ.