ಶಿರಾಡಿಘಾಟ್ ರಸ್ತೆ ಸಂಚಾರ ಇನ್ನಷ್ಟು ದುಸ್ತರ : ದ್ವಿತೀಯ ಹಂತದ ಕಾಮಗಾರಿ ಟೆಂಡರ್ ರದ್ದು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಶಿರಾಡಿಘಾಟ್ ದ್ವಿತೀಯ ಹಂತದ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ಇನ್ನಷ್ಟು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ಸಂಚರಿಸುವ ಮಂದಿ ನರಕಯಾತನೆಯ ಸಂಚಾರ ಮಾಡಬೇಕಾಗಿದೆ. ದ್ವಿತೀಯ ಹಂತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಹಿನ್ನೆಲೆಯಲ್ಲಿ ಇಲ್ಲಿ ಯಾವುದೇ ತಾತ್ಕಾಲಿಕವಾದ ದುರಸ್ತಿ ಕಾರ್ಯವನ್ನೂ ಹೆದ್ದಾರಿ ಇಲಾಖೆ ಕೈಗೊಂಡಿರಲಿಲ್ಲ. ಈ ಕಾರಣಕ್ಕಾಗಿ ಈ ರಸ್ತೆ ಇದೀಗ ಸಂಪೂರ್ಣ ಕೆಟ್ಟು ಹೋಗಿದ್ದು, ವಾಹನ ಸವಾರರು ಇಲ್ಲಿ ಸಂಕಷ್ಟದ ಪರಿಸ್ಥಿತಿಯಲ್ಲಿ ವಾಹನವನ್ನು ಚಲಾಯಿಸಬೇಕಾಗಿದೆ. ಅದರಲ್ಲೂ ಬೈಕ್ ಸವಾರರ ಪರಿಸ್ಥಿತಿಯನ್ನಂತೂ ಹೇಳಿ ಪ್ರಯೋಜನವಿಲ್ಲದಂತಾಗಿದೆ.

ಶಿರಾಡಿಘಾಟ್ ದ್ವಿತೀಯ ಹಂತದ ಕಾಮಗಾರಿಯನ್ನು ಈಗಾಗಲೇ ಕೈಗೆತ್ತಿಕೊಳ್ಳಬೇಕಾಗಿತ್ತು. ಆದರೆ ಸೂಕ್ತ ಟೆಂಡರುದಾರರು ಸಿಗದ ಕಾರಣ ಕಾಮಗಾರಿ ಇನ್ನೂ ವಿಳಂಬವಾಗಲಿದೆ. ರಾಷ್ಟ್ರೀಯ ಹೆದ್ದಾರಿಯ ಪಿಡಬ್ಲ್ಯೂಡಿ ಇಲಾಖೆ ಸುಮಾರು 13 ಕಿ ಮೀ ದೂರದ ಕಾಮಗಾರಿಯನ್ನು ಪ್ರಾರಂಭಿಸಬೇಕಾಗಿತ್ತು.

ಗುಂಡ್ಯದಿಂದ ಕೆಂಪುಹೊಳೆಯ ಗೆಸ್ಟ್ ಹೌಸಿನವರೆಗಿನ ಕಾಮಗಾರಿ ನಡೆಯಬೇಕಾಗಿತ್ತು. ಆದರೆ ಇಲ್ಲಿ ಕಾಮಗಾರಿ ನಡೆಸಲು ಉದ್ದೇಶಿಸಿದ್ದ ಹಿನ್ನೆಲೆಯಲ್ಲಿ ಪ್ಯಾಚ್ ವರ್ಕ್ ಕೂಡಾ ಮಾಡಿಲ್ಲ. ಹೀಗಾಗಿ ಈ ರಸ್ತೆಯಲ್ಲಿ ಹೊಂಡಗುಂಡಿಗಳೇ ತುಂಬಿ ಹೋಗಿದೆ. ಜಲ್ಲಿ ಕಲ್ಲುಗಳು ಎದ್ದುಹೋಗಿದ್ದು, ಸಂಚಾರ ಸಾಧ್ಯವಾಗುತ್ತಿಲ್ಲ. ಆದರೆ ಕೆಂಪುಹೊಳೆಯಿಂದ ಹೆಗ್ಗದ್ದೆಯವರೆಗೆ ಕಾಂಕ್ರಿಟೀಕರಣ ಕಾಮಗಾರಿ 2015ರಲ್ಲಿ ಪೂರ್ಣಗೊಳಿಸಲಾಗಿತ್ತು.

ಕನಿಷ್ಠ ಚಿಕ್ಕಪುಟ್ಟ ವಾಹನ ಸಾಗುವಂತಾಗಲಾದರೂ ರಸ್ತೆಯನ್ನು ದುರಸ್ತಿ ಪಡಿಸಬೇಕಾಗಿದೆ ಎಂದು ಬೆಂಗಳೂರು ಟೂರಿಸ್ಟ್ ಟ್ಯಾಕ್ಸಿ ಮಾಲಕರ ಸಂಘವು ಆಗ್ರಹಿಸಿದೆ.

ಕಾಮಗಾರಿ ನಿರ್ವಹಣೆಗೆ ಗುತ್ತಿಗೆದಾರರು ಸಿಕ್ಕಿಲ್ಲ ಎಂದು ಗುತ್ತಿಗೆಯನ್ನು ಇಲಾಖೆ ರದ್ದು ಪಡಿಸಿದೆ. ನವೆಂಬರ್ 2015ರಲ್ಲಿ ಜಿವಿಆರ್ ಇನ್ ಫ್ರಾ ಪ್ರೊಜೆಕ್ಟ್ ಲಿ ಕಂಪೆನಿಗೆ ಈ ಕಾಮಗಾರಿ ನಿರ್ವಹಣೆ ನೀಡಲಾಗಿತ್ತು. ಕೆಲಸದ ಆದೇಶ ನೀಡಿ 13 ತಿಂಗಳುಗಳೇ ಕಳೆದರೂ ಇನ್ನೂ ಕಾಮಗಾರಿಗೆ ಬೇಕಾದ ಸೊತ್ತುಗಳನ್ನೇ ತಂದು ಹಾಕಲು ಕಂಪೆನಿಗೆ ಸಾಧ್ಯವಾಗಿರಲಿಲ್ಲ.