ಜ 3ರಿಂದ ಶಿರಾಡಿಘಾಟಿ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ಅನುಮಾನ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳೂರು-ಬೆಂಗಳೂರು ನಡುವಿನ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟಿಯ ದ್ವಿತೀಯ ಹಂತದ ಕಾಂಕ್ರೀಟ್ ರಸ್ತೆ ಕಾಮಗಾರಿಗಾಗಿ ಜ 3ರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ್ ಬಂದ್ ಆಗುವುದು ಅನುಮಾನವಾಗಿದೆ. ಸ್ಥಳೀಯವಾಗಿ ಯಾವುದೇ ಆದೇಶವೂ ಗುತ್ತಿಗೆದಾರರು ಅಥವಾ ಇಂಜಿನಿಯರುಗಳ ಕೈ ಸೇರದ ಕಾರಣ ಜ 3ರಿಂದ ಕೆಲಸ ಪ್ರಾರಂಭವಾಗುತ್ತಿಲ್ಲ.

ಜ 3ರಿಂದ ಕೆಲಸ ಪ್ರಾರಂಭಗೊಂಡು ರಸ್ತೆ ಸಂಚಾರ ಸ್ಥಗಿತಗೊಳ್ಳಲಿದೆ ಎಂದು ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದರೂ ಕಾಮಗಾರಿ ಜನವರಿ ಮಧ್ಯಭಾಗದಲ್ಲಿ ಪ್ರಾರಂಭಗೊಳ್ಳುವ ಸಾದ್ಯತೆ ಇದೆ ಎನ್ನಲಾಗುತ್ತಿದೆ.

ಕಳೆದ ವರ್ಷ ಮೊದಲ ಹಂತದ ರಸ್ತೆ ಕಾಂಕ್ರಿಟೀಕರಣ ಆಗಸ್ಟಿನಲ್ಲಿ 69.90 ಕೋಟಿ ರೂ ವೆಚ್ಚದಲ್ಲಿ 11.77 ಕಿ ಮೀ ರಸ್ತೆಯನ್ನು ಮಾಡಲಾಗಿತ್ತು. ದ್ವಿತೀಯ ಹಂತದಲ್ಲಿ ಶಿರಾಡಿ ಘಾಟಿಯ ಗುಳಗಳಲೆಯಿಂದ ಹೆಗ್ಗದ್ದೆಯವರೆಗೆ (21 ಕಿ ಮೀ) ಡಾಮರೀಕರಣ ಹಾಗೂ ಕೆಂಪುಹೊಳೆಯಿಂದ ಅಡ್ಡ ಹೊಳೆಯವರೆಗೆ(12.38) ಕಿ ಮೀ ಕಾಂಕ್ರೀಟ್ ಕಾಮಗಾರಿ ನಡೆಸಲಾಗುತ್ತಿದೆ. ಇದಕ್ಕಾಗಿ ಈಗಾಗಲೇ 85.28 ಕೋಟಿ ರೂ ಹಣ ಮಂಜೂರಾಗಿದೆ.

ಮೊದಲ ಹಂತದ ಕಾಮಗಾರಿ ಸಂದರ್ಭದಲ್ಲಿ ರಸ್ತೆಯನ್ನು 7 ತಿಂಗಳ ಕಾಲ ಮುಚ್ಚಲಾಗಿತ್ತು. ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡಿಯೇ ಕಾಮಗಾರಿಯನ್ನು ನಡೆಸಬೇಕಾಗಿದೆ ಎಂದು ಗುತ್ತಿಗೆದಾರರು ಮತ್ತು ಎಂಜಿನಿಯರುಗಳು ಹೇಳಿದ್ದಾರೆ.

“ಹೆದ್ದಾರಿ ಬಂದ್ ಮಾಡುವ ಮುನ್ನ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಂತೆ ಹೆದ್ದಾರಿ ಇಲಾಖೆಗೆ ತಿಳಿಸಲಾಗಿದೆ. ಅಲ್ಲಿಂದ ಸೂಚನೆ ಬಂದ ಬಳಿಕ ಅಧಿಕೃತ ಘೋಷಣೆ ಹೊರಬೀಳಲಿದೆ” ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ.