ಮೊದಲ ಮಳೆಗೆ ಕೊಚ್ಚಿ ಹೋದ ಶಿಮಂತೂರು ರಸ್ತೆ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಕಳೆದೆರಡು ದಿನಗಳಿಂದ ಮುಲ್ಕಿ ಪರಿಸರದಲ್ಲಿ ಬಿದ್ದ ಭಾರೀ ಮಳೆಗೆ ಅತಿಕಾರಿಬೆಟ್ಟು ಗ್ರಾಮ ಪಂಚಾಯತಿ ವ್ಯಾಪ್ತಿಯ ಶಿಮಂತೂರು ದೇವಸ್ಥಾನ ರಸ್ತೆ ಕೊಚ್ಚಿ ಹೋಗಿದ್ದು, ನಾಗರಿಕರಿಗೆ ನಡೆದಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇತಿಹಾಸ ಪ್ರಸಿದ್ದ ಶಿಮಂತೂರು ಆದಿಜನಾರ್ಧನ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಬೃಹತ್ ಹೊಂಡ ನಿರ್ಮಾಣವಾಗಿದ್ದು ರಸ್ತೆಯಲ್ಲಿ ಸಾಗಲು ವಾಹನಗಳು ಸರ್ಕಸ್ ಮಾಡುವ ಪರಿಸ್ಥಿತಿ ಎದುರಾಗಿದೆ.

ಶಿಮಂತೂರು ದೇವಸ್ಥಾನದಿಂದ ಮುಲ್ಕಿಗೆ ಬರುವಲ್ಲಿ ರಸ್ತೆ ಅಗೆದು ಮೋರಿ ಅಳವಡಿಸಲಾಗಿದ್ದು, ಬೃಹತ್ ಹೊಂಡ ನಿರ್ಮಾಣವಾಗಿದೆ. ಶಿಮಂತೂರು ಪಂಜಿನಡ್ಕ ರಸ್ತೆಯಲ್ಲಿ ಅರ್ಧಂಬರ್ದ ಕಾಂಕ್ರೀಟೀಕರಣ ನಡೆಸಿದ್ದು, ಉಳಿದರ್ದ ಮಣ್ಣಿನ ರಸ್ತೆಯಲ್ಲಿ ರಭಸದಿಂದ ಬರುತ್ತಿರುವ ನೀರು ಹಾಗೂ ಕೆಸರಿನಿಂದ ಕಾಂಕ್ರೀಟು ರಸ್ತೆ ನಾಶದ ಭೀತಿಯಲ್ಲಿದೆ ಹಾಗೂ ರಸ್ತೆಯಲ್ಲಿ ಸಂಚರಿಸಲು ಅನಾನುಕೂಲವಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅತಿಕಾರಿಬೆಟ್ಟು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.