ಸಿಂಡಿಕೇಟ್ ಬ್ಯಾಂಕ್ ಬೆಂಗ್ರೆ ಶಾಖೆ ಎತ್ತಂಗಡಿಗೆ ವಿರೋಧ

ಕರಾವಳಿ ಅಲೆ ವರದಿ

ಮಂಗಳೂರು : ಇಲ್ಲಿನ ಬೆಂಗ್ರೆಯಲ್ಲಿ ಕಳೆದ ನಲ್ವತ್ತು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಸಿಂಡಿಕೇಟ್ ಬ್ಯಾಂಕಿನ ಶಾಖೆಯನ್ನು ಸ್ಥಳಾಂತರಿಸುವುದಕ್ಕೆ ಬೆಂಗ್ರೆ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಂಗ್ರೆ ಶಾಖೆಯನ್ನು ಇನ್ಯಾವುದೇ ಶಾಖೆಯೊಂದಿಗೆ ವಿಲೀನ ಮಾಡಬಾರದೆಂದು ಬೆಂಗ್ರೆ ನಿವಾಸಿಗಳು ಇತ್ತೀಚೆಗೆ ಬ್ಯಾಂಕ್ ಅಧಿಕಾರಿಗಳನ್ನು ಭೇಟಿ ಮಾಡಿ ಒತ್ತಾಯಿಸಿದ್ದಾರೆ.

ನಾಲ್ಕು ಸುತ್ತಲು ನೀರಿನಿಂದ ಆವೃತ್ತವಾಗಿರುವ ಬೆಂಗ್ರೆ ನಿವಾಸಿಗಳು ನಗರಕ್ಕೆ ಬರಲು ಹೆಚ್ಚಾಗಿ ದೋಣಿಯನ್ನು ಆಶ್ರಯಿಸಿದ್ದಾರೆ. ಸಾವಿರಾರು ಮಂದಿ ಸಿಂಡಿಕೇಟ್ ಬ್ಯಾಂಕಿನೊಂದಿಗೆ ವ್ಯವಹಾರ ಹೊಂದಿದ್ದು, ಬೇರೆ ಶಾಖೆಯೊಂದಿಗೆ ವಿಲೀನ ಮಾಡುವುದರಿಂದ ಬೆಂಗ್ರೆ ನಿವಾಸಿಗಳಿಗೆ ಇಷ್ಟು ತೊಂದರೆ ಆಗಲಿದೆ ಎಂದು ಬೆಂಗ್ರೆ ಮಹಾಜನ ಸಭಾ ಹೇಳಿದೆ.

ಮಿಷನ್ ಸ್ಟ್ರೀಟ್ ಶಾಖೆಯೊಂದಿಗೆ ಬೆಂಗ್ರೆ ಶಾಖೆಯ ವಿಲೀನ ಪ್ರಸ್ತಾವನೆಯಿದ್ದು, ಮಿಷನ್ ಸ್ಟ್ರೀಟ್ ಶಾಖೆ ಈಗಾಗಲೇ ವ್ಯವಹಾರಿಕವಾಗಿ ಕುಸಿತ ಕಂಡಿರುವಾಗ ಆ ಶಾಖೆಯನ್ನು ಕೂಡ ಇನ್ನೊಂದು ಶಾಖೆಯಿಂದ ವಿಲೀನ ಮಾಡಬಹುದು ಎನ್ನಲಾಗುತ್ತಿದೆ.

ಬೆಂಗ್ರೆ ಪ್ರದೇಶದಲ್ಲಿ ಹನ್ನೆರಡು ಸಾವಿರ ಮಂದಿ ವಾಸ್ತವ್ಯ ಹೊಂದಿದ್ದು, ಇದು ಏಕೈಕ ಬ್ಯಾಂಕ್ ಶಾಖೆಯಾಗಿದೆ. ಈ ಶಾಖೆಯನ್ನು ಮುಚ್ಚಿದರೆ ಇಲ್ಲಿನ ಸಾವಿರಾರು ಮಂದಿ ಪಿಂಚಣಿ ಪಡೆಯುವ ವೃದ್ಧರಿಗೆ ಸಮಸ್ಯೆ ಆಗಲಿದೆ ಎನ್ನುತ್ತಾರೆ ಬೆಂಗ್ರೆ ಮಹಾಜನ ಸಭಾದ ಮುಖಂಡ ಮೋಹನ ಪುತ್ರನ್.

ಮುಂದೆ ಸಂಭವಿಸಬಹುದಾದ ಅನಾಹುತಗಳನ್ನು ತಪ್ಪಿಸಲು ಸಿಂಡಿಕೇಟ್ ಬ್ಯಾಂಕ್ ಆಡಳಿತ ತಮ್ಮ ನಿರ್ಧಾರ ಬದಲಿಸಬೇಕು ಹಾಗೂ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಸಹಕರಿಸಬೇಕಾಗಿದೆ ಎಂದು ಬೆಂಗ್ರೆ ನಿವಾಸಿಗಳು ಒತ್ತಾಯಿಸಿದ್ದಾರೆ.

 

LEAVE A REPLY