ರೈತರ ಸಾಲ ಮನ್ನಾ ಮಾಡದ ಸೀಎಂ ವಿತಂಡವಾದ ಮಾಡುತ್ತಿದ್ದಾರೆ : ಶೆಟ್ಟರ್

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : “ನಾನು ಮುಖ್ಯಮಂತ್ರಿಯಾಗಿದ್ದಾಗ ರೈತರ 25 ಸಾವಿರ ರೂಪಾಯಿ ಮನ್ನಾ ಮಾಡಿದ್ದೇನೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ನೀಡಬೇಕು ಎಂದು ಷರತ್ತು ಹಾಕುತ್ತಿದ್ದಾರೆ. ಇವರಿಗೆ ರಾಜಕೀಯ ಇಚ್ಛಾ ಶಕ್ತಿಯೂ ಇಲ್ಲ. ರೈತರ ಹಿತಾಸಕ್ತಿಯಂತೂ ಬೇಕಿಲ್ಲ” ಎಂದು ಮಾಜಿ ಸೀಎಂ ಮತ್ತು ಅಸೆಂಬ್ಲಿಯಲ್ಲಿ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಟೀಕಿಸಿದ್ದಾರೆ.

“ಹಿಂಗಾರು, ಮುಂಗಾರು ಕೈ ಕೊಟ್ಟಿದೆ. 170 ತಾಲೂಕುಗಳಲ್ಲಿ ಬರ ಬಂದಿದೆ. ಇದನ್ನು ನಿರ್ವಹಿಸುವಲ್ಲಿ ರಾಜ್ಯ ಸರಕಾರ ಎಡವಿದೆ. ಮೇವಿನ ವಿಚಾರದಲ್ಲಿ ಕೋಟ್ಯಂತರ ರೂ ಹಗರಣವೇ ನಡೆದಿದೆ. ರೈತರ ಆತ್ಯಹತ್ಯೆಗೆ ಕೊನೆ ಇಲ್ಲವಾಗಿದೆ. ರೈತ ಸಾಲಮನ್ನಾ ನಿಷ್ಠಾವಂತ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದ್ದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ, ಬರ ಪೀಡಿತ ಪ್ರದೇಶದ ಜನತೆ ಚೇತರಿಸಿಕೊಳ್ಳುವ ಮೊದಲೇ ಇದೀಗ ಸರಕಾರ ವಿದ್ಯುತ್ ದರ ಏರಿಸಿ ಜನರ ಮೇಲೆ ಬರೆ ಎಳೆದಿದೆ. ರೈತರ ಹಿತಾಸಕ್ತಿಯನ್ನು ಮರೆತಿದೆ. ಜನಹಿತಕ್ಕಾಗಿ ಸಮರ್ಥ ನಿಲುವು ತೆಗೆದುಕೊಳ್ಳಲು ಸಿದ್ದರಾಮಯ್ಯ ಸರಕಾರ ವಿಫಲವಾಗುತ್ತಿದೆ” ಎಂದು ರಾಜ್ಯ ಸರಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು.

ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ವಿದ್ಯುತ್ ಪ್ರಸರಣ ಮತ್ತು ಹಂಚಿಕೆಯಲ್ಲಿ ವೈಜ್ಞಾನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಸುಧಾರಣೆ ಮಾಡಿ ನಷ್ಟವಾಗುವುದನ್ನು ತಪ್ಪಿಸಬೇಕೇ ಹೊರತು ವಿದ್ಯುತ್ ದರ ಏರಿಸುವುದು ಸರಿಯಲ್ಲ” ಎಂದು ಆಗ್ರಹಿಸಿದರು.

“ಸಿದ್ಧರಾಮಯ್ಯ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ರಾಜ್ಯ ವಿದ್ಯುತ್ತಿನಲ್ಲಿ ಸ್ವಾವಲಂಬಿಯಾಗುವ ಬಗ್ಗೆ ಹೇಳಿದ್ದರು. ಆದರೆ ಅದನ್ನು ಸಾಧ್ಯವಾಗಿಸುವಲ್ಲಿ ವಿಫಲರಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಹೊಸ ಬಿಜೆಪಿ ಸರ್ಕಾರ 24 ಗಂಟೆ ವಿದ್ಯುತ್ ಕೊಡುವ ಸುಧಾರಣೆಗೆ ಸಂಕಲ್ಪ ಮಾಡಿದೆ. ರಾಜ್ಯದಲ್ಲಿ 24 ಗಂಟೆ ವಿದ್ಯುತ್ ಕೊಡುವ ಬಗ್ಗೆ ಮಾತೇ ಇಲ್ಲ. ವಿದ್ಯುತ್ ಏರಿಕೆ ದೊಡ್ಡ ಪ್ರಮಾದ”ವೆಂದು ಅವರು ಹೇಳಿದರು.