ವಿದ್ಯುತ್ ದರ ಏರಿಕೆಗೆ ಜ ಶೆಟ್ಟರ್ ಖಂಡನೆ

ಮಂಗಳೂರು : ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ  ವಿದ್ಯುತ್ ದರವನ್ನು ಪ್ರತಿ ಯೂನಿಟಿಗೆ 48 ಪೈಸೆ ಏರಿಕೆ ಮಾಡಿರುವುದನ್ನು ರಾಜ್ಯ ವಿಧಾನ ಸಭೆಯ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ತೀವ್ರವಾಗಿ ಖಂಡಿಸಿದ್ದಾರೆ. “ಈಗಾಗಲೇ ಮೂರು ಬಾರಿ ವಿದ್ಯುತ್ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಅಲ್ಲದೆ ರಾಜ್ಯದ ಜನತೆ ಬರದಿಂದ ತತ್ತರಿಸುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಮತ್ತೆ ಏರಿಕೆ ಮಾಡುವ ಅಗತ್ಯವಾದರೂ ಏನಿತ್ತು?“ ಎಂದು ಮಾಜಿ ಮುಖ್ಯಮಂತ್ರಿಗಳೂ ಆಗಿರುವ ಶೆಟ್ಟರ್ ಪ್ರಶ್ನಿಸಿದ್ದಾರೆ. ಈ ಏರಿಕೆ ಜನತೆಗೆ ಇನ್ನಷ್ಟು ಶಾಕ್ ನೀಡಿದೆ ಎಂದವರು ಹೇಳಿದ್ದಾರೆ.

ಉಜಿರೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಸರಕಾರವು ವಿದ್ಯುತ್ ಉತ್ಪಾದನೆ ಹೆಚ್ಚಳಕ್ಕೆ ಹಾಗೂ ವಿದ್ಯುತ್ ಸಾಗಾಟ ವಿತರಣೆ ಸಂದರ್ಭದಲ್ಲಿ ಉಂಟಾಗುತ್ತಿರುವ ಸೋರಿಕೆಯನ್ನು ಮೊದಲು ತಡೆಗಟ್ಟಬೇಕು. ಹಾಗೆ ಮಾಡಿದರೆ, ವಿದ್ಯುತ್ ದರವನ್ನು ಏರಿಕೆ ಮಾಡುವ ಪ್ರಮೇಯವೇ ಉಂಟಾಗುತ್ತಿರಲಿಲ್ಲ“ ಎಂದವರು ಹೇಳಿದರು.

“ಸರಕಾರವು  ಸೋಲಾರ್ ವಿದ್ಯುಚ್ಛಕ್ತಿ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕು. ಈ ಕುರಿತ ಜಾಗೃತಿ ಹೆಚ್ಚಿಸಬೇಕು“ ಎಂದರು. ವಿದ್ಯುತ್ ದರ ಏರಿಕೆಗೆ ಸಹಕಾರ ನೀಡುವ ಮೂಲಕ ಸಿದ್ಧರಾಮಯ್ಯನವರು ರಾಜ್ಯದ ಬಡವರ್ಗದವರ ಮತ್ತು ರೈತರನ್ನು ಸಂಕಷ್ಟಕ್ಕೆ ದೂಡಿದ್ದಾರೆ ಎಂದರು.