ಆಕೆ ಈಗಾದರೂ ನನ್ನವಳಾಗಬಹುದೇ?

ಪ್ರ : ನಾನೀಗ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದೇನೆ. ವಯಸ್ಸು ನಲವತೈದು. ಆದರೂ ಇನ್ನೂ ಅವಿವಾಹಿತ. ನಾನು ಪ್ರೀತಿಸಿದ ಹುಡುಗಿ ನನಗೆ ಸಿಗದ ಬೇಸರದಲ್ಲಿ ಮದುವೆಯನ್ನೇ ಆಗಿಲ್ಲ. ನಾನು ಆಗಷ್ಟೇ ಎಂಎಸ್‍ಸಿ ಮುಗಿಸಿ ಡಿಗ್ರಿ ಕಾಲೇಜಿಗೆ ಪಾಠ ಹೇಳುತ್ತಿದ್ದೆ. ಅವಳು ಎರಡನೇ ವರ್ಷದ ಡಿಗ್ರಿಯಲ್ಲಿ ಇದ್ದಳು. ಅವಳು ಗಲ್ಲದ ಮೇಲೆ ಕೈಯಿಟ್ಟುಕೊಂಡು ತದೇಕಚಿತ್ತಳಾಗಿ ನನ್ನನ್ನು ನೋಡುತ್ತಾ ಪಾಠ ಕೇಳುವ ಅವಳ ಆ ಪರಿ ಹೊಸದಾಗಿ ಕೆಲಸಕ್ಕೆ ಸೇರಿದ ನನಗೆ ಉತ್ತೇಜಿಸುವಂತಿರುತ್ತಿತ್ತು. ಕ್ಲಾಸಿಗೇ ಫಸ್ಟ್ ಬರುತ್ತಿದ್ದ ಅವಳ ಮೇಲೆÉ ನನಗೆ ಅಭಿಮಾನವಿತ್ತು. ಆಕೆ ತನಗೆ ಗೊತ್ತಿಲ್ಲದ ವಿಷಯ ಕೇಳಲು ಆಗಾಗ ಸ್ಟಾಫ್‍ರೂಮಿಗೂ ಬರುತ್ತಿದ್ದರಿಂದ ನಮ್ಮ ಮಧ್ಯೆ ಆತ್ಮೀಯತೆಯೂ ಬೆಳೆದಿತ್ತು. ಅವಳು ಡಿಗ್ರಿ ಮುಗಿಸಿ ಕಾಲೇಜು ಬಿಟ್ಟು ಹೋದ ಮೇಲೆ ನನಗೆ ಕಾಲೇಜೇ ಬೋರಾಗಲು ಶುರುವಾಯಿತು. ಅವಳನ್ನು ನಾನು ಪ್ರೀತಿಸುತ್ತಿದ್ದೇನೆ ಅಂತ ಅರಿವಿಗೆ ಬಂದಿದ್ದೇ ಆಗ. ಹೇಗಾದರೂ ಅವಳನ್ನು ಭೇಟಿ ಮಾಡಿ ನನ್ನ ಪ್ರೇಮನಿವೇದನೆ ಮಾಡಿಕೊಳ್ಳಬೇಕು ಅನ್ನುವಷ್ಟರಲ್ಲಿಯೇ ಅವಳ ಮದುವೆಯ ಆಮಂತ್ರಣ ನನ್ನ ಕೈಸೇರಿ ನನ್ನ ಆಶಾಗೋಪುರವೇ ಕುಸಿದುಬಿತ್ತು. ಮತ್ತೆ ಯಾರ ಮೇಲೂ ನನಗೆ ಮನಸ್ಸಾಗಲಿಲ್ಲ. ನನ್ನ ಕೆಲಸದಲ್ಲೇ ನನ್ನನ್ನು ತೊಡಗಿಸಿಕೊಂಡು ಇಷ್ಟು ವರ್ಷ ಕಳೆದೆ. ಪುನಃ ಆಕೆಯನ್ನು ನೋಡಿದ್ದು ಅವಳು ತನ್ನ ಮಗನನ್ನು ಡಿಗ್ರಿಗೆ ಸೇರಿಸಲು ಬಂದಾಗ. ಅಕಸ್ಮಾತ್ತಾಗಿ ಅವಳನ್ನು ನೋಡಿದಾಗ ನನ್ನ ದೇಹದಲ್ಲಿ ಮಿಂಚು ಸಂಚರಿಸಿದಂತಾಯಿತು. ಆಕೆಯೀಗ ತನ್ನ ಗಂಡನನ್ನು ಕಳೆದುಕೊಂಡು ಯಾವುದೋ ಪ್ರೈವೇಟ್ ಕಂಪೆನಿಯಲ್ಲಿ ಕೆಲಸ ಮಾಡುತ್ತಾ ಮಗನನ್ನು ಓದಿಸುತ್ತಿದ್ದಾಳೆ. ಈಗ ಎರಡು ಸಲ ಅವಳು ನನ್ನನ್ನು ಮೀಟ್ ಮಾಡಿದ್ದಾಳೆ. ನಮ್ಮಲ್ಲಿ ಅದೇ ಆತ್ಮೀಯತೆ ಇದೆ. ನಾನು ಆಕೆಯನ್ನು ಮದುವೆಯಾಗಲು ಈಗಲೂ ತಯಾರಿದ್ದೇನೆ. ಆದರೆ ಈ ವಿಷಯ ಅವಳಿಗಿನ್ನೂ ಹೇಳಿಲ್ಲ. ಅವಳು ಈಗಲಾದರೂ ನನ್ನ ಬಾಳು ಪ್ರವೇಶಿಸಬಹುದೇ?

: ಅವಳ ನೆನಪಲ್ಲೇ ಇಷ್ಟು ದಿನ ನೀವು ಮದುವೆಯಾಗದೇ ಇದ್ದಿದ್ದು ನೋಡಿದರೆ ಬಹುಶಃ ಆಕೆಯೇ ನಿಮ್ಮ ಮನೆ, ಮನ ತುಂಬಲು ಪುನಃ ಬಂದಿರಬೇಕು ಅಂತಲೇ ಅನಿಸುತ್ತಿದೆ. ಅವಳೂ ಈಗ ಗಂಡನನ್ನು ಕಳೆದುಕೊಂಡು ಸಂಗಾತಿಯಿಲ್ಲದೇ ಒಂಟಿಯಾಗಿದ್ದಾಳೆ. ಈ ಸಮಯದಲ್ಲಿ ಆಕೆಗೂ ನಿಮ್ಮ ಸಾಂಗತ್ಯದಿಂದ ಜೀವನದಲ್ಲಿ ಮತ್ತೆ ಆಸೆ ಚಿಗುರಬಹುದು. ಆದರೂ ಅವಳ ಮನಸ್ಸೇನು ಹೇಳುತ್ತದೆ ಎನ್ನುವುದು ಎಲ್ಲಕ್ಕಿಂತ ಮುಖ್ಯ. ಒಂದುವೇಳೆ ಅವಳು ತನ್ನ ಗಂಡನನ್ನು ತುಂಬಾ ಪ್ರೀತಿಸುತ್ತಿದ್ದು ಅವರ ನೆನಪಿನಲ್ಲೇ ಉಳಿದ ಜೀವನ ಕಳೆಯಲು ನಿರ್ಧರಿಸಿದ್ದರೆ ನೀವು ಅವಳನ್ನು ಒತ್ತಾಯದಿಂದ ಮದುವೆಯಾಗುವುದು ತರವಲ್ಲ. ಅವಳ ಕಷ್ಟಕಾಲದಲ್ಲಿ ಒಬ್ಬರು ಆತ್ಮೀಯರು ಸಿಕ್ಕಿದರು ಅನ್ನುವ ಭಾವನೆಯಷ್ಟೇ ಅವಳಿಗೆ ನಿಮ್ಮ ಮೇಲಿರಲೂಬಹುದು. ಆದರೂ ನಿಮ್ಮ ಮನಸ್ಸಿನ ಭಾವನೆಯನ್ನು ಆಕೆಯಲ್ಲಿ ಹೇಳಿ ಅವಳ ಅಭಿಪ್ರಾಯವನ್ನು ಮುಕ್ತವಾಗಿ ಹೇಳುವಂತೆ ಕೇಳುವುದರಲ್ಲಿ ತಪ್ಪಿಲ್ಲ. ಅವಳೂ ತನ್ನ ಮತ್ತು ಮಗನ ಭವಿಷ್ಯದ ದೃಷ್ಟಿಯಿಂದ ಯೋಚಿಸಲಿ. ಮಗನೂ ಬೆಳೆದಿದ್ದರಿಂದ ಅವನೂ ನಿಮಗೆ ತಂದೆಯ ಸ್ಥಾನ ಕೊಡಬಲ್ಲನೇ ಅನ್ನುವುದೂ ಮುಖ್ಯ. ತಾಯಿ ಮತ್ತು ಮಗ ಇಬ್ಬರೂ ಮನಸ್ಸುಮಾಡಿದರೆ ಉಳಿದವರಿಗೆ ಹೆದರುವ ಅಗತ್ಯವಿಲ್ಲ. ಧಾರಾಳವಾಗಿ ಸರಳ ವಿವಾಹವಾಗಿ ಅವರಿಬ್ಬರನ್ನೂ ಮನೆ ತುಂಬಿಸಿಕೊಳ್ಳಿ.