ಸದ್ಯವೇ ಮದುವೆಯಾಗಲಿದ್ದಾಳಾ ಶ್ರುತಿ

ಶ್ರುತಿ ಹಾಸನ್ ಈಗ ಕೆಲವು ಸಮಯದಿಂದ ಲಂಡನ್ ಮೂಲದ ಆಕ್ಟರ್ ಮೈಖೇಲ್ ಕೊರ್ಸೇಲ್ ಎನ್ನುವವರ ಜೊತೆ ಡೇಟಿಂಗಿನಲ್ಲಿದ್ದು ಸದ್ಯವೇ ಅವರನ್ನು ಮದುವೆಯಾಗಲಿದ್ದಾಳೆ ಎನ್ನುವ ಗುಸುಗುಸು ಕೇಳಿ ಬರುತ್ತಿದೆ. ಅದಕ್ಕೆ ಪುಷ್ಟಿ ಕೊಡಲೋ ಎಂಬಂತೆ ಮೊನ್ನೆ ಶ್ರುತಿ ತಮ್ಮ ಕುಟುಂಬ ಸ್ನೇಹಿತರ ಮದುವೆಯಲ್ಲಿ ತನ್ನ ಅಪ್ಪ ಕಮಲ್ ಹಾಸನ್ ಹಾಗೂ ಬಾಯ್ಫ್ರೆಂಡ್ ಮೈಖೇಲ್ ಜೊತೆ ಭಾಗವಹಿಸಿದ್ದಾಳೆ.

ಶ್ರುತಿ ಕೆಲವು ದಿನಗಳ ಹಿಂದಷ್ಟೇ ತಾಯಿ ಸಾರಿಕಾಗೆ ಮೈಖೇಲ್ ಅವರನ್ನು ಪರಿಚಯಿಸಿದ್ದು ಅವರು ಮೂರೂ ಜೊತೆಯಾಗಿರುವ ಫೋಟೋ ಇಂಟರ್ನೆಟ್ಟಿನಲ್ಲಿ ಹರಿದಾಡಿತ್ತು. ಇದೀಗ ಮದುವೆ ಸಮಾರಂಭದಲ್ಲಿ ಮೈಖೇಲ್ ಸಮೇತ ಅಪ್ಪ ಕಮಲ್ ಹಾಸನ್ ಜೊತೆಗೂಡಿ ಭಾಗವಹಿಸಿದ್ದು ನೋಡಿದರೆ ಕಮಲ್ ಹಾಗೂ ಸಾರಿಕಾ ಶ್ರುತಿ-ಮೈಖೇಲ್ ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದೇ ಅನಿಸುತ್ತದೆ. ಶ್ರುತಿ ಈ ಫೊಟೋದಲ್ಲಿ ಕೆಂಪು ಜರತಾರಿ ಸೀರೆಯಲ್ಲಿ ಮಿನುಗುತ್ತಿದ್ದರೆ ಮೈಖೇಲ್ ರೇಷ್ಮೆ ಪಂಚೆ, ಶರ್ಟಿನಲ್ಲಿ ಪಕ್ಕಾ ಸೌತ್ ಇಂಡಿಯನ್ ಸ್ಟೈಲಿನಲ್ಲಿ ಕಂಗೊಳಿಸುತ್ತಿದ್ದರು.

ಅಂದ ಹಾಗೆ ಶ್ರುತಿಗೆ ತನ್ನ ವೈಯಕ್ತಿಕ ಜೀವನದ ಬಗ್ಗೆ ಪಬ್ಲಿಕ್ಕಾಗಿ ಚರ್ಚಿಸುವ ಮನಸ್ಸಿಲ್ಲವಂತೆ. ಈ ಮೊದಲು ಯಾರಾದರೂ ಆಕೆಯ ಬಳಿ ಬಾಯ್ಫ್ರೆಂಡ್ ಬಗ್ಗೆ ಕೇಳಿದರೆ “ನಾನು ಆ ಬಗ್ಗೆ ಮಾತಾಡಲು ಇಷ್ಟ ಪಡುವುದಿಲ್ಲ. ನನಗೆ ಅಂತಹ ಪ್ರಶ್ನೆ ಕೇಳಿದರೆ ಕಿರಕಿರಿ ಅಂತೇನೂ ಇಲ್ಲ. ಆದರೆ ನಾನು ಆದನ್ನು ನಿರ್ಲಕ್ಷಿಸಲು ಬಯಸುತ್ತೇನೆ” ಎಂದಿದ್ದಳು.