ಭಟ್ಕಳ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ಮುಂದುವರಿದ ಕೇಸರಿ ಶಾಲು ಧಾರಣೆ

ನಮ್ಮ ಪ್ರತಿನಿಧಿ ವರದಿ

ಭಟ್ಕಳ : ಇಲ್ಲಿನ ರಂಗೀಕಟ್ಟೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕಿಯರು ಬುರ್ಖಾ ಧರಿಸಿ ಪಾಠ ಮಾಡುವುದನ್ನು ವಿರೋಧಿಸಿ ವಿದ್ಯಾರ್ಥಿಗಳ ಕೇಸರಿ ಶಾಲು ಧಾರಣೆ ಸೋಮವಾರವೂ ಮುಂದುವರಿದಿದ್ದು, ತಕ್ಷಣ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಕಾಲೇಜಿಗೆ ಆಗಮಿಸಿ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಕಾಲೇಜಿನಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲ. ಶೌಚಾಲಯನ್ನು 2 ದಿನಕ್ಕೊಮ್ಮೆ ಸ್ವಚ್ಛಗೊಳಿಸಲಾಗುತ್ತದೆ. ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ಕಾಲೇಜಿನ ಆವರಣದಲ್ಲಿ ಪಾರ್ಕಿಂಗ್ ಮಾಡಲು ಸ್ಥಳಾವಕಾಶವಿಲ್ಲ. ವಿದ್ಯಾರ್ಥಿಗಳ ಎಸೈನ್ಮೆಂಟ್ ಪ್ರತಿ ಎಲ್ಲೆಲ್ಲೋ ಬಿದ್ದಿದೆ ಎನ್ನುವುದು ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

“ಕಾಲೇಜಿನಲ್ಲಿ ಅಭಿವೃದ್ಧಿ ಸಮಿತಿಯ ಸಭೆ ನಡೆಸದೇ ತುಂಬಾ ದಿನಗಳಾಗಿವೆ. ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಶಾಸಕರೇ ಆಗಿದ್ದರೂ ಕಾಲೇಜಿಗಾಗಮಿಸಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿಲ್ಲ. ಕೂಡಲೇ ಕಾಲೇಜಿನಲ್ಲಿ ಶಾಸಕರು ಅಭಿವೃದ್ಧಿಯ ಸಮಿತಿಯ ಸದಸ್ಯರ ಸಭೆ ಕರೆದು ವಿದ್ಯಾರ್ಥಿಗಳ ಸಮಸ್ಯೆ ಆಲಿಸಬೇಕು. ಕಾಲೇಜಿಗೆ ಮೂಲಭೂತ ಸೌಕರ್ಯ ಒದಗಿಸಲು ಮುಂದಾಗಬೇಕು. ಎಲ್ಲಿಯವರೆಗೆ ಉಪನ್ಯಾಸಕಿಯರು ಬುರ್ಖಾ ಧರಿಸಿ ಪಾಠ ಮಾಡುತ್ತಾರೋ ಅಲ್ಲಿಯವರೆಗೆ ನಾವೂ ಕೂಡ ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರುತ್ತೇವೆ. ಸಮಸ್ಯೆ ಬಗೆಹರಿಯುವ ತನಕ ನಮ್ಮ ಶಾಂತಿಯುತ ಹೋರಾಟ ಮುಂದುವರಿಯುತ್ತದೆ” ಎಂದು ಕೇಸರಿ ಶಾಲು ಧಾರಣಾ ವಿದ್ಯಾರ್ಥಿಗಳು ತಿಳಿಸಿದರು.

ಕಾಲೇಜಿಗೆ ಭೇಟಿ ನೀಡಿದ ಪತ್ರಕರ್ತರ ಜೊತೆ ಮಾತನಾಡಿದ ಪ್ರಾಂಶುಪಾಲೆ ಕೆ ಪಿ ಮಂಜುಳಾ, “ಕಳೆದ ವರ್ಷ 2 ಬಾರಿ ಅಭಿವೃದ್ಧಿ ಸಮಿತಿಯ ಸಭೆ ನಡೆದಿದೆ. ವಿದ್ಯಾರ್ಥಿಗಳು ಅಭಿವೃದ್ಧಿ ಸಮಿತಿಯ ಸಭೆ ನಡೆದೇ ಇಲ್ಲ ಎಂದು ಹೇಳುವುದು ಸರಿಯಲ್ಲ. ಸಭೆ ನಡೆದ ಬಗ್ಗೆ ನಮ್ಮಲ್ಲಿ ನಡಾವಳಿ ಪುಸ್ತಕ ದಾಖಲೆ ಇದೆ. ಕಾಲೇಜಿನಲ್ಲಿ ಕೆಲವು ಕೊರತೆಗಳಿದ್ದರೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ಅಭಿವೃದ್ಧಿ ಸಮಿತಿಯ ಸಭೆ ನಡೆಸಬೇಕು ಎಂದು ಆಗ್ರಹಿಸುತ್ತಿದ್ದಾರೆ ಎಂದು ಈಗಾಗಲೇ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕರಾಗಿರುವ ಮಂಕಾಳ ವೈದ್ಯರಿಗೆ ತಿಳಿಸಲಾಗಿದೆ” ಎಂದರು.

ಕಾಲೇಜಿನಲ್ಲಿ ದಿನದಿಂದ ದಿನಕ್ಕೆ ಬುರ್ಖಾ ಮತ್ತು ಕೇಸರಿ ಶಾಲು ಧಾರಣೆ ವಿವಾದದ ಜೊತೆಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಹೋರಾಟ ಜೋರಾಗುತ್ತಿದ್ದು, ಕೂಡಲೇ ಈ ಸಮಸ್ಯೆ ಬಗೆಹರಿಸಬೇಕಾಗಿದೆ. ವಿದ್ಯಾರ್ಥಿಗಳು, ಕಾಲೇಜು ಅಭಿವೃದ್ಧಿ ಸಮಿತಿ ಸಭೆ ಕರೆದು ಚರ್ಚಿಸುವವರೆಗೂ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.