ಶಶಿಕಲಾ ಉನ್ನತಿ ಬಿಜೆಪಿಗೆ ಪ್ರಬಲ ಸವಾಲು

ಜಯಲಲಿತಾ ಸಂಗಾತಿ ಶಶಿಕಲಾ

ಅಕ್ರಮ ಆಸ್ತಿ ವಿವಾದ ಪ್ರಕರಣ ಸುಪ್ರೀಂಕೋರ್ಟ್ ಅಂಗಳದಲ್ಲಿದ್ದು ಈ  ಮೊಕದ್ದಮೆಯಲ್ಲಿ ಶಶಿಕಲಾ ಬಚಾವ್ ಆದರೆ ಮುಖ್ಯಮಂತ್ರಿಯಾಗುವುದು ಖಚಿತ ಎನ್ನಬಹುದು.

  • ಸತ್ಯಮೂರ್ತಿ

ವಿ ಕೆ ಶಶಿಕಲಾ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಒಮ್ಮತದಿಂದ ಆಯ್ಕೆ ಮಾಡುವ ಮೂಲಕ ಎಐಎಡಿಎಂಕೆ ಪಕ್ಷ ಕೊನೆಗೂ ಜಯಲಲಿತಾ ಅವರ ಪ್ರಭಾವಳಿಯಿಂದ ಹೊರಬರಲು ಯತ್ನಿಸುತ್ತಿದೆ ಎಂದು ಭಾಸವಾಗುತ್ತದೆ.  ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರಾಮಮೋಹನ್ ರಾವ್ ಅವರ ಅಕ್ರಮ ಆಸ್ತಿಯ ಮೇಲೆ ಆದಾಯ ತೆರಿಗೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಎಐಎಡಿಎಂಕೆ ಬಿಜೆಪಿಯನ್ನು ಕೆಣಕಿಸುವಂತೆ ಶಶಿಕಲಾ ಅವರ ಅಯ್ಕೆ ಮಾಡಿದೆ. ಜಯಲಲಿತಾ ಮೃತಪಟ್ಟ ನಂತರ ಶಶಿಕಲಾ ಅವರ ಬಗ್ಗೆ ಅನೇಕ ಬಿಜೆಪಿ ನಾಯಕರು ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದರು.  ಆದರೆ ಪಕ್ಷ ತನ್ನ ಸ್ವಾಯತ್ತತೆಯನ್ನು ಕಾಪಾಡಿಕೊಂಡಿದೆ.  ಪಕ್ಷದ ಸಾಮಾನ್ಯ ಸಮಿತಿ ಸಭೆಯಲ್ಲಿ ಶಶಿಕಲಾ ಆಯ್ಕೆಯ ಪ್ರಸ್ತಾವನೆಯನ್ನು ಮಂಡಿಸಿದ್ದು ಮುಖ್ಯಮಂತ್ರಿ ಪನ್ನೀರ್‍ಸೆಲ್ವಂ. ಪನ್ನೀರ್‍ಸೆಲ್ವಂ ಅವರೊಡನೆ ಪಕ್ಷದ ನಿರ್ಣಯವನ್ನು ಶಶಿಕಲಾಗೆ ತಿಳಿಸಲು ನಾಯಕರ ದಂಡೇ ತೆರಳಿತ್ತು. ಒಂದು ಶುಭದಿನದಂದು ಶಶಿಕಲಾ ಪಕ್ಷದ ಅಧಿಪತ್ಯ ವಹಿಸಿಕೊಳ್ಳಲಿದ್ದಾರೆ.

ಜಯಲಲಿತಾರ ಅಂತ್ಯ ಸಂಸ್ಕಾರದ ನಂತರವೂ ಶಶಿಕಲಾ ಮತ್ತು ಅವರ ವಿವಾದಾಸ್ಪದ ಕುಟುಂಬ ಸದಸ್ಯರು ರಾಜ್ಯ ರಾಜಕಾರಣದಲ್ಲಿ ಪ್ರಭಾವಶಾಲಿ ಪಾತ್ರ ನಿರ್ವಹಿಸಿದ್ದಾರೆ. ಟೀವಿ ವಾಹಿನಿಗಳ ಮೂಲಕವೂ ತಮ್ಮ ಪ್ರಾತಿನಿಧ್ಯವನ್ನು ಪ್ರದರ್ಶಿಸಿದ್ದರು. ಡಿಸೆಂಬರ್ 29ರಂದು ಪನ್ನೀರ್ ಸೆಲ್ವಂ ಶಶಿಕಲಾ ಅವರನ್ನು ಭೇಟಿ ಮಾಡಿದಾಗ ಅವರಿಗೆ ಬೆನ್ನೆಲುಬಾಗಿ ನಿಂತಿದ್ದವರು ಆಕೆಯ ಸೋದರ ಸಂಬಂಧಿ ಟಿ ಟಿ ವಿ ದಿನಕರನ್. ಇವರು ಒಂದು ಕಾಲದಲ್ಲಿ ಜಯಲಲಿತಾ ಆಪ್ತರಾಗಿದ್ದು ನಂತರ ಪಕ್ಷದಿಂದ ಉಚ್ಚಾಟಿತರಾಗಿದ್ದರು. ಈ ಸಂದರ್ಭದಲ್ಲಿ ಶಶಿಕಲಾ ಅವರ ಪತಿ ನಟರಾಜನ್ ಅವರ ಹೆಸರನ್ನು ಉದ್ದೇಶಪೂರ್ವಕವಾಗಿಯೇ ಮರೆಮಾಚಲಾಗಿತ್ತು.  ಇತ್ತ ಶಶಿಕಲಾ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗುತ್ತಿರುವಂತೆಯೇ ಮತ್ತೊಂದೆಡೆ ಮದ್ರಾಸ್ ಹೈಕೋರ್ಟ್ ತನ್ನ ಮಹತ್ತರ ತೀರ್ಪೊಂದರಲ್ಲಿ ಜಯಲಲಿತಾ ಅವರ ಮರಣವನ್ನು ಕುರಿತು ಮರು ತನಿಖೆ ನಡೆಸುವ ಉದ್ದೇಶದಿಂದ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಕೋರ್ಟಿನ ಈ ನೋಟಿಸಿಗೂ ಪಕ್ಷದ ಚಟುವಟಿಕೆಗಳಿಗೂ ಯಾವುದೇ ಸಂಬಂಧವಿಲ್ಲದೆ ಹೋದರೂ, ಮಾಧ್ಯಮ ವರದಿಗಳ ಪ್ರಕಾರ ಜಯಲಲಿತಾರ ಆರೋಗ್ಯ ಸುಧಾರಿಸುತ್ತಿದೆ ಎಂಬ ಮಾಹಿತಿ ಒದಗಿದ ಕೆಲವೇ ದಿನಗಳಲ್ಲಿ ಅವರು ಮೃತರಾಗಿದ್ದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಹಾಗಾಗಿಯೇ ಜಯಲಲಿತಾ ಅವರ ಶವವನ್ನು ಮರುಪರೀಕ್ಷೆಗೊಳಪಡಿಸಲು ಆದೇಶಿಸಿದೆ.

ರಾಜ್ಯ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡುವುದು ಅಪರೂಪದ ಸಂಗತಿ. ಜಯಲಲಿತಾ ಆಸ್ಪತ್ರೆಯಲ್ಲಿದ್ದಾಗ ಅವರ ಯೋಗಕ್ಷೇಮ ವಿಚಾರಿಸಲು ಬಿಜೆಪಿ ನಾಯಕರಾದ ಅರುಣ್ ಜೈಟ್ಲಿ, ವೆಂಕಯ್ಯ ನಾಯ್ಡು ಮತ್ತು ತಮಿಳುನಾಡಿನ ರಾಜ್ಯಪಾರ ವಿದ್ಯಾಸಾಗರ ರಾವ್ ಭೇಟಿ ನೀಡಿದ್ದರಿಂದ ಕೇಂದ್ರ ಸರ್ಕಾರಕ್ಕೆ ಜಯಲಲಿತಾ ಅವರ ಆರೋಗ್ಯದ ಬಗ್ಗೆ ಮಾಹಿತಿ ಇತ್ತು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಇದಕ್ಕೂ ಮುನ್ನ ಶಶಿಕಲಾ ಅವರ ಸಂಭಾವ್ಯ ಆಯ್ಕೆಯ ಔಚಿತ್ಯವನ್ನು ಪ್ರಶ್ನಿಸಿ ಶಶಿಕಲಾ ಪುಷ್ಪಾ ಎಂಬುವರು ಡಿಸೆಂಬರ್  23ರಂದೇ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಪಕ್ಷದ ನಿಯಮಗಳ ಅನುಸಾರ ಕನಿಷ್ಠ ಐದು ವರ್ಷಗಳ ಪ್ರಾಥಮಿಕ ಸದಸ್ಯತ್ವ ಹೊಂದಿರುವವರು ಮಾತ್ರ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಅರ್ಹತೆ ಪಡೆದಿರುತ್ತಾರೆ ಎಂದು ಶಶಿಕಲಾ ಪುಷ್ಟ ವಾದಿಸಿದ್ದರು. ಆದರೆ ಸಾಮಾನ್ಯ ಸಮಿತಿ ಸಭೆಯ  ಹಿಂದಿನ ದಿನ ಶಶಿಕಲಾ ಪುಷ್ಪ ಅವರ ಪತಿ ಲಿಂಗೇಶ್ವರ ತಿಲಗನ್ ಮತ್ತಿತರರು ಎಐಎಡಿಎಂಕೆ ಕಚೇರಿಗೆ ಆಗಮಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು. ಆದರೆ ಎಐಎಡಿಎಂಕೆ ಕಾರ್ಯಕರ್ತರು ಇವರ ಮೇಲೆ ಹಲ್ಲೆ ನಡೆಸಿ ಅಲ್ಲಿಂದ ಉಚ್ಚಾಟಿಸಿದ್ದರು.

ರಾಮಗೋಪಾಲ್ ರಾವ್ ಅವರ ಕಚೇರಿಯ ಮೇಲೆ ನಡೆದ ಆದಾಯ ತೆರಿಗೆ ದಾಳಿಯ ರೀತಿಯಲ್ಲೇ ಏಪ್ರಿಲ್ ತಿಂಗಳಲ್ಲಿ ಕರೂರ್ ಅನ್ಬುನಾಥನ್ ಮತ್ತು ಮಾಜಿ ಸಚಿವ ನಾತಮ್ ವಿಶ್ವನಾಥನ್ ಅವರ ಮನೆಯ ಮೇಲೆಯೂ ನಡೆದಿತ್ತು. ನಕ್ಕೀರನ್ ಪತ್ರಿಕೆಯಲ್ಲಿ ಇದರ ವಿವರಗಳೂ ಪ್ರಕಟವಾಗಿದ್ದವು. ಬಹುಶಃ ಮುಂದಿನ ದಿನಗಳಲ್ಲಿ ಈ ದಾಳಿ ಮತ್ತಷ್ಟು ತೀವ್ರವಾಗುವ ಸಾಧ್ಯತೆಗಳಿವೆ. ಈ ದಾಳಿಯ ನಂತರ ಪಕ್ಷದಲ್ಲಿ ಯಾವುದೇ ಆಂತರಿಕ ಬಿಕ್ಕಟ್ಟು ಇಲ್ಲ ಎಂದು ನಿರೂಪಿಸುವಲ್ಲಿ ಎಐಎಡಿಎಂಕೆ ಸಫಲವಾಗಿದೆ ಮತ್ತೊಂದೆಡೆ ಶಶಿಕಲಾಗೆ ಪಕ್ಷ ಇಂದು ಅನಿವಾರ್ಯವಾಗಿದೆ. ಅಕ್ರಮ ಆಸ್ತಿ ವಿವಾದ ಪ್ರಕರಣ ಸುಪ್ರೀಂಕೋರ್ಟ್ ಅಂಗಳದಲ್ಲಿದ್ದು ಈ  ಮೊಕದ್ದಮೆಯಲ್ಲಿ ಶಶಿಕಲಾ ಬಚಾವ್ ಆದರೆ ಮುಖ್ಯಮಂತ್ರಿಯಾಗುವುದು ಖಚಿತ ಎನ್ನಬಹುದು. ಜಯಲಲಿತಾ ಅವರೊಡನೆ ರಾಜಕಾರಣದಲ್ಲಿ ಪಳಗಿರುವ ಶಶಿಕಲಾ ತಾಳ್ಮೆಯ ಮಹತ್ವವನ್ನು ಅರಿತಿದ್ದಾರೆ. ಹಾಗಾಗಿಯೇ ನಡೆಯುತ್ತಿರುವ ಎಲ್ಲ ಚಟುವಟಿಕೆಗಳನ್ನೂ ಗಮನಿಸುತ್ತಲೇ ಬಂದಿದ್ದಾರೆ. ಬಹುಶಃ ಇದೇ ತಂತ್ರವನ್ನು ಅನುಸರಿಸಿ ರಾಜ್ಯ ರಾಜಕಾರಣದಲ್ಲಿ ತಮ್ಮ ಅಧಿಪತ್ಯ ಸಾಧಿಸುವ ಸಾಧ್ಯತೆಗಳಿವೆ.