ಜಯಾ ಸುತ್ತಮುತ್ತ ಆವರಿಸಿದ್ದ ಶಶಿಕಲಾ ಕುಟುಂಬದ ಮಾಫಿಯಾ

ಜಯಲಲಿತಾ ಸಂಗಾತಿ ಶಶಿಕಲಾ

ಪನ್ನೀರ್‍ಸೆಲ್ವಂ ಮತ್ತು ಶಶಿಕಲಾ ಇಬ್ಬರೂ ತೇವರ್ ಸಮುದಾಯಕ್ಕೆ ಸೇರಿದವರಾಗಿದ್ದು ವಿಭಿನ್ನ ಉಪಜಾತಿಗಳಿಗೆ ಸೇರಿದವರಾಗಿದ್ದಾರೆ. ಎಂಜಿಆರ್ ಮತ್ತು ಜಯಲಲಿತಾ ಅವರಂತೆ ವ್ಯಕ್ತಿಗತ ಕರಿಷ್ಮಾ ಇಲ್ಲದೆ ಮತ್ತು ದಿಟ್ಟವಾಗಿ ನಿರ್ವಹಿಸುವ ಸಾಮಥ್ರ್ಯವಿಲ್ಲದೆ ಪಕ್ಷವನ್ನು ಮುನ್ನಡೆಸಲು ಸಾಧ್ಯವಾಗುವುದಿಲ್ಲ. ಶಶಿಕಲಾ ಈ ಸಂದರ್ಭದಲ್ಲಿ ಹೇಗೆ ನಿಭಾಯಿಸುತ್ತಾರೆ ಎಂದು ಕಾದು ನೋಡಬೇಕಿದೆ

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ದಿವಂಗತರಾದ ನಂತರ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಜಯಲಲಿತಾರ ಆಪ್ತ ಗೆಳತಿ ಶಶಿಕಲಾ ವಹಿಸಿಕೊಳ್ಳಲಿದ್ದಾರೆÉ. ಜಯಲಲಿತಾ ಅವರ ಆಶ್ರಯದಲ್ಲಿದ್ದುಕೊಂಡು ಅಧಿಕಾರ ಚಲಾಯಿಸುವುದಕ್ಕೂ, ಮತ್ತೊಬ್ಬ ಮುಖ್ಯಮಂತ್ರಿ ಹುದ್ದೆಯ ಕಾರ್ಯಭಾರ ನಿರ್ವಹಿಸುವುದಕ್ಕೂ ಇರುವ ವ್ಯತ್ಯಾಸವನ್ನು ಬಹುಶಃ ಶಶಿಕಲಾ ಮುಂದಿನ ದಿನಗಳಲ್ಲಿ ಗ್ರಹಿಸಲಿದ್ದಾರೆ.

ಜಯಾಗೆ ಬಾಡಿ ಗಾರ್ಡಿನಂತಿದ್ದ ದಿವಾಕರನ್
ಜಯಾಗೆ ಬಾಡಿ ಗಾರ್ಡಿನಂತಿದ್ದ ದಿವಾಕರನ್

ಶಶಿಕಲಾ ಮತ್ತು ಜಯಲಲಿತಾರ ನಡುವಿನ ಸಂಬಂಧಗಳು ಸದಾ ಸೌಹಾರ್ದತೆಯಿಂದ ಕೂಡಿರಲಿಲ್ಲ. 2011ರಲ್ಲಿ ಪಕ್ಷದ ಆದೇಶವೊಂದರ ಮೂಲಕ ಜಯಲಲಿತಾ ತಮ್ಮ ಆಪ್ತ ಸಹಾಯಕಿ ಶಶಿಕಲಾ, ಆಕೆಯ ಪತಿ ನಟರಾಜನ್ ಮತ್ತು ಇತರ 12 ಸದಸ್ಯರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾ ಮಾಡಿರುವುದಾಗಿ ಘೋಷಿಸಿದ್ದರು. ಶಶಿಕಲಾ ಅವರೊಡನೆ ಯಾವುದೇ ಸಂಪರ್ಕ ಹೊಂದಿರದಂತೆ ಪಕ್ಷದ ಕಾರ್ಯಕರ್ತರಿಗೆ ಆದೇಶ ನೀಡಲಾಗಿತ್ತು. ಮುಖ್ಯಮಂತ್ರಿ ಅಧಿಕೃತ ನಿವಾಸದಿಂದಲೂ ಅವರನ್ನು ಹೊರಹಾಕಲಾಗಿತ್ತು.  ಪಕ್ಷ ಮತ್ತು ಸರ್ಕಾರದ ಅಂತರಿಕ ವ್ಯವಹಾರಗಳಲ್ಲಿ ಅನಗತ್ಯ ಹಸ್ತಕ್ಷೇಪ ಮಾಡಿದ್ದ ಆರೋಪದ ಮೇಲೆ ಶಶಿಕಲಾ ಅವರನ್ನು ಉಚ್ಚಾಟಿಸಲಾಗಿತ್ತು. ಇದೇ ಸಂದರ್ಭದಲ್ಲಿ ವಿಶೇಷ ಯೋಜನೆ ಅನುಷ್ಠಾನದ ಅಧಿಕಾರಿಯಾಗಿದ್ದ ಎ ಪನ್ನೀರ್‍ಸೆಲ್ವಂ ರಾಜೀನಾಮೆ ನೀಡಿದ್ದರು. ಗುಪ್ತಚರ ಇಲಾಖೆಯ ಡಿಐಜಿ ಮಾಣಿಕ್ಕವೇಲ್ ವರ್ಗಾವಣೆಯಾಗಿದ್ದರು. ಶಶಿಕಲಾ ಮತ್ತು ಕುಟುಂಬದವರು ತಮ್ಮ ವಿರುದ್ಧ ಸಂಚು ನಡೆಸುತ್ತಿರುವುದಾಗಿ ಗ್ರಹಿಸಿದ್ದ ಜಯಲಲಿತಾ ಅವರ ನಿಕಟವರ್ತಿಗಳ ವಿರುದ್ಧವೂ ಕ್ರಮ ಕೈಗೊಂಡಿದ್ದರು.

1980ರಲ್ಲಿ ಪ್ರಪ್ರಥಮ ಬಾರಿಗೆ ಪರಸ್ಪರ ಭೇಟಿಯಾಗಿದ್ದ ಶಶಿಕಲಾ ಮತ್ತು ಜಯಲಲಿತಾ ಶೀಘ್ರದಲ್ಲೇ ಗೆಳಸ್ಯಕಂಠಸ್ಯ ಎಂಬಂತಾಗಿದ್ದರು. ತೇವರ್ ಸಮುದಾಯದವರಾದ ಶಶಿಕಲಾ ಮೂಲತಃ ಮನ್ನಾರಗುಡಿಯವರು. ಅವರ ಪತಿ ನಟರಾಜನ್ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿದ್ದು ಅವರ ಮಾರ್ಗದರ್ಶನದಲ್ಲೇ ವಿಡಿಯೋ ಪಾರ್ಲರ್ ನಡೆಸುತ್ತಿದ್ದ ಶಶಿಕಲಾ ಗೆಳತಿ ಜಯಲಲಿತಾ ಅವರ ಸಾರ್ವಜನಿಕ ಸಭೆಗಳ ವಿಡಿಯೋಗಳನ್ನು ತಯಾರಿಸುತ್ತಿದ್ದರು. ಈ ಸಂದರ್ಭದಲ್ಲಿ ಪಕ್ಷದ ಪ್ರಚಾರ ಕಾರ್ಯದರ್ಶಿಯಾಗಿದ್ದ ಜಯಲಲಿತಾ ಶಶಿಕಲಾ ಅವರೊಡನೆ ಸ್ನೇಹ ಬೆಳೆಸಿದ್ದರು. ಎಂಜಿಆರ್ ನಿಧನಾನಂತರ ಈ ಸ್ನೇಹ ಮತ್ತಷ್ಟು ಗಾಢವಾಗಿತ್ತು. ಶಶಿಕಲಾ ಅವರ ಕುಟುಂಬವನ್ನು ಬಹುತೇಕ ದತ್ತು ಪಡೆದ ಜಯಲಲಿತಾ, ಶಶಿಕಲಾ ಅವರ ಸೋದರ ಸಂಬಂಧಿ ಸುಧಾಕರನ್ ಅವರನ್ನು ದತ್ತುಪುತ್ರನನ್ನಾಗಿ ಸ್ವೀಕರಿಸಿದ್ದರು. ಎಂಜಿಆರ್ ನಿಧನಾನಂತರ ಜಯಲಲಿತಾ ಏಕಾಂಗಿತನವನ್ನು ಅನುಭವಿಸಿದ್ದೂ ಇದಕ್ಕೆ ಕಾರಣವಾಗಿತ್ತು. ಸುಧಾಕರನ್ ವಿವಾಹವನ್ನು ಅತ್ಯಂತ ಅದ್ಧೂರಿಯಾಗಿ ನೆರವೇರಿಸಿದ ಜಯಲಲಿತಾ ನಂತರ ಕೆಲವೇ ದಿನಗಳಲ್ಲಿ ತನ್ನ ದತ್ತುಪುತ್ರನನ್ನು ನಿರಾಕರಿಸಿದ್ದೇ ಅಲ್ಲದೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೂ ಆತನನ್ನು ಉಚ್ಛಾಟಿಸಿದ್ದರು. ಪಕ್ಷದಿಂದ ಉಚ್ಚಾಟಿತರಾದ ದಿವಾಕರನ್ ಮತ್ತು ಭಾಸ್ಕರನ್ ಶಶಿಕಲಾ ಅವರ ಸೋದರಿ ವನಿತಾಮಣಿಯ ಪುತ್ರರಾಗಿದ್ದರು. ಇವರೆಲ್ಲರೂ ಜಯಯಲಿತಾ ಅವರ ಸಾಂಗತ್ಯದ ಫಲಾನುಭವಿಗಳಾಗಿದ್ದರು. ದಿನಕರನ್ ರಾಜ್ಯಸಭೆ ಮತ್ತು ಲೋಕಸಭೆಯ ಸದಸ್ಯರೂ ಆಗಿದ್ದರು. ಭಾಸ್ಕರನ್ ಜೆಜೆ ಟಿವಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದು, ಜಯಾ ಟಿವಿ ಆರಂಭವಾದ ನಂತರ ಹುದ್ದೆ ತ್ಯಜಿಸಿದ್ದರು.

ಉಚ್ಚಾಟಿತರ ಪಟ್ಟಿಯಲ್ಲಿದ್ದ ಎಸ್ ವೆಂಕಟೇಶ್ ಮೂಲತಃ ವೈದ್ಯರಾಗಿದ್ದು ಶಶಿಕಲಾ ಅವರ ಸೋದರ ಸುಂದರವದನನ್ ಅವರ ಪುತ್ರರಾಗಿದ್ದರು. ಪಕ್ಷದ ಯುವ ಪಡೆಯ ಕಾರ್ಯದರ್ಶಿಯಾಗಿದ್ದ ವೆಂಕಟೇಶ್ ಪ್ರಭಾವಿ ನಾಯಕರೂ ಆಗಿದ್ದರು. 2009ರ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ಮಿತ್ರ ಪಕ್ಷಗಳೊಡನೆ ಮಾತುಕತೆ ನಡೆಸುವುದರಲ್ಲಿ ವೆಂಕಟೇಶ್ ಮುಂಚೂಣಿ ಪಾತ್ರ ವಹಿಸಿದ್ದರು. ನಂತರ 2010ರಲ್ಲಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಈ ಸಂದರ್ಭದಲ್ಲಿ ಶಶಿಕಲಾ ಸಂಬಂಧಿಗಳನ್ನು ಸಾಮೂಹಿಕವಾಗಿ ಉಚ್ಚಾಟಿಸಲಾಗಿತ್ತು.

ಆದರೆ 2012ರಲ್ಲಿ ಶಶಿಕಲಾ ತಮ್ಮ ಉಳಿದ ಸಂಬಂಧಿಕರೊಡನೆ ಪುನಃ ಜಯಲಲಿತಾ ಅವರಿಗೆ ನಿಕಟವಾದರು. ಶಶಿಕಲಾರ ಸೋದರಿ ಇಳವರಸಿ ಇವರಲ್ಲಿ ಪ್ರಮುಖರಾಗಿದ್ದರು. ಈಗ ಒ ಪನ್ನೀರ್‍ಸೆಲ್ವಂ ಮುಖ್ಯಮಂತ್ರಿಯಾಗಿದ್ದು ಶಶಿಕಲಾ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗುವುದು ಖಚಿತವಾಗಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನು ಆಯ್ಕೆ ಮಾಡುವಲ್ಲಿ ಕೇವಲ ಶಾಸಕರು ಮಾತ್ರ ಮುಖ್ಯವಾಗುವುದಿಲ್ಲ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪಕ್ಷದ ನಾಯಕರ ಅಭಿಪ್ರಾಯವೂ ಮುಖ್ಯವಾಗುತ್ತದೆ. ಪನ್ನೀರ್‍ಸೆಲ್ವಂ ಮತ್ತು ಶಶಿಕಲಾ ಇಬ್ಬರೂ ತೇವರ್ ಸಮುದಾಯಕ್ಕೆ ಸೇರಿದವರಾಗಿದ್ದು ವಿಭಿನ್ನ ಉಪಜಾತಿಗಳಿಗೆ ಸೇರಿದವರಾಗಿದ್ದಾರೆ. ಎಂಜಿಆರ್ ಮತ್ತು ಜಯಲಲಿತಾ ಅವರಂತೆ ವ್ಯಕ್ತಿಗತ ಕರಿಷ್ಮಾ ಇಲ್ಲದೆ ಮತ್ತು ದಿಟ್ಟವಾಗಿ ನಿರ್ವಹಿಸುವ ಸಾಮಥ್ರ್ಯವಿಲ್ಲದೆ ಪಕ್ಷವನ್ನು ಮುನ್ನಡೆಸಲು ಸಾಧ್ಯವಾಗುವುದಿಲ್ಲ. ಶಶಿಕಲಾ ಈ ಸಂದರ್ಭದಲ್ಲಿ ಹೇಗೆ ನಿಭಾಯಿಸುತ್ತಾರೆ ಎಂದು ಕಾದು ನೋಡಬೇಕಿದೆ