ಜಯಾ ಜತೆ ನಂಟು ಕೊಚ್ಚಿಕೊಳ್ಳುತ್ತಿರುವ ಶಶಿಕಲಾ ಕುಟುಂಬ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅಸುನೀಗಿ ತಿಂಗಳಿನ್ನೂ ಆಗಿಲ್ಲ. ಆದರೆ ಈಗಾಗಲೇ  ಆಕೆಯ  ಆತ್ಮೀಯ ಗೆಳತಿಯಾಗಿದ್ದ ಶಶಿಕಲಾ ನಟರಾಜನ್ ಅವರ ಕುಟುಂಬವು  ಮಾಜಿ ಮುಖ್ಯಮಂತ್ರಿ ಮೇಲೆ ತಾನಿರಿಸಿದ್ದ ಪ್ರೀತಿ, ವಾತ್ಸಲ್ಯ  ಹಾಗೂ ನಿಷ್ಠೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೊಚ್ಚಿಕೊಳ್ಳಲು ಆರಂಭಿಸಿದೆ.

ಶಶಿಕಲಾ ಅವರ  ಸೋದರಳಿಯ (ಡಾ ವಿ ದಿವಾಕರನ್ ಅವರ ಪುತ್ರ) ಜೆಯನಂಧ್ ದಿವಾಕರÀನ್ ಹಲವಾರು ಫೇಸ್ಬುಕ್ ಪೋಸ್ಟುಗಳಲ್ಲಿ ಮಣ್ರ್ಣಗುಡಿ ಕುಟುಂಬ ಜಯಲಲಿತಾ ಅವರ ಕಷ್ಟಕಾಲದಲ್ಲಿ ಅವರಿಗೆ ಹಲವಾರು ಬಾರಿ ಸಹಾಯ ಮಾಡಿದೆ ಎಂದು ಹೇಳಿಕೊಂಡಿದ್ದಾರೆ.

“ಅಮ್ಮ ಅವರನ್ನು ಆವರ ಕುಟುಂಬ ದೂರ ಮಾಡಿದಾಗ ಶಶಿಕಲಾ ಅವರ ಸಹೋದರ ದಿವಾಕರನ್ ಅವರು ಜಯಲಲಿತಾ ಅವರನ್ನು ಮೂರು ಬಾರಿ ಹತ್ಯೆ ಯತ್ನಗಳಿಂದ ಬಚಾವ್ ಮಾಡಿದ್ದಾರೆ” ಎಂದು ಒಂದು ಪೋಸ್ಟ್ ಹೇಳಿದರೆ, ಇನ್ನೊಂದು ಪೋಸ್ಟಿನಲ್ಲಿ “ಜಯಲಲಿತಾ ಅವರನ್ನು ಲಾಠಿ ಚಾರ್ಜ್ ಸಂಚೊಂದರಿಂದ ರಕ್ಷಿಸುವ ಭರದಲ್ಲಿ ಶಶಿಕಲಾ ಅವರ ಸಹೋದರನ್ ದಿವಾಕರನ್ ಅವರ ತಲೆಯಲ್ಲಿ 14 ಗಾಯಗಳಾಗಿದ್ದವು” ಎಂದು ಬರೆದಿದ್ದಾರೆ.

ಜಯಲಲಿತಾ ಅವರೊಂದಿಗೆ ಶಶಿಕಲಾ ಕುಟುಂಬಕ್ಕಿತ್ತೆನ್ನಲಾದ ಅವಿನಾಭಾವ ಸಂಬಂಧದ ಬಗ್ಗೆ ಜೆಯನಂಧ್ “ಓವರ್ ದಿ ಇಯರ್ಸ್ ” ಎಂಬ ಹ್ಯಾಶ್ ಟ್ಯಾಗ್ ಬಳಸಿ ಹೇಳಿಕೊಂಡಿದ್ದರು. ಶಶಿಕಲಾ ಅವರು ದೂರ ಮಾಡಿದ್ದ ಅವರ ಪತಿ `ಗೋಲ್ಡನ್ ಮ್ಯಾನ್’ ಎಂ ನಟರಾಜನ್ ಅವರ ಮರು ಆಗಮನದ ಘೋಷಣೆಯನ್ನು ಮಾಡುವ ಪೋಸ್ಟರುಗಳೂ ಚೆನ್ನೈ ನಗರದಲ್ಲಿ ಕಾಣಿಸಿಕೊಂಡಿವೆ.

`ಜಯಲಲಿತಾ ಅವರಿಲ್ಲದೇ ಇರುವ ಇಂತಹ ಸಂದರ್ಭದಲ್ಲಿ ಅವರ ನಷ್ಟವನ್ನು ತುಂಬುವಂತಹ ಹಾಗೂ ರಾಜ್ಯವನ್ನು ಕಾಪಾಡುವಂತಹ ಗೋಲ್ಡನ್ ಮ್ಯಾನ್ ನಟರಾಜನ್ ಆಗಿದ್ದಾರೆ’ ಎಂಬರ್ಥದ ಹಲವು ಪೋಸ್ಟರುಗಳೂ ನಗರದಲ್ಲಿ ರಾರಾಜಿಸುತ್ತಿವೆ. ಭೂಕಬಳಿಕೆ ಪ್ರಕರಣವೊದರಲ್ಲಿ ಬಂಧಿತರಾಗಿ ತಿರುಚ್ಚಿ ಕೇಂದ್ರ ಕಾರಾಗೃಹದಲ್ಲಿ ನಟರಾಜನ್ ಒಮ್ಮೆ ಸೆರೆವಾಸ ಅನುಭವಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.