ತಾರತಮ್ಯದ ವಿರುದ್ಧ ಹೊಸ ಮಸೂದೆ ಮುಂದಿಟ್ಟ ತರೂರ್

ಕಳೆದ ವಾರ ಕಾಂಗ್ರೆಸ್ ಸಂಸದ ಶಶಿ ತರೂರ್ ಲೋಕಸಭೆಯಲ್ಲಿ ತಾರತಮ್ಯ ವಿರೋಧಿ ಮಸೂದೆಯನ್ನು ಸಂಸತ್ತಿನ ಮುಂದಿಟ್ಟಿದ್ದಾರೆ. ಈ ಕಾನೂನು ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರ ಮತ್ತು ಸರ್ಕಾರಿ ಅಧಿಕಾರಿಗಳು ಅಥವಾ ಪೊಲೀಸರು ಕೂಡ ತಾರತಮ್ಯವನ್ನು ತಡೆಯಲು ವಿಫಲರಾದಲ್ಲಿ ಶಿಕ್ಷಾರ್ಹರೆನಿಸಲಿದ್ದಾರೆ.

ಕಳೆದ ಹಲವು ವರ್ಷಗಳಿಂದ ಭಾರತದಲ್ಲಿ ತಾರತಮ್ಯ ವಿರೋಧಿ ಕಾನೂನಿಗಾಗಿ ಪ್ರಯತ್ನಿಸುತ್ತಿರುವ ಅಸೋಸಿಯೇಟ್ ಪ್ರೊಫೆಸರ್ ತರುಣಭ್ ಖೈತಾನ್ ಸಹಯೋಗದಲ್ಲಿ ಈ ಮಸೂದೆಯನ್ನು ಸಿದ್ಧಪಡಿಸಲಾಗಿದೆ.

ದಲಿತರು, ಮುಸ್ಲಿಮರು, ಮಹಿಳೆಯರು, ವಿಭಿನ್ನ ಲಿಂಗಿಗಳು, ವಿಕಲ ಚೇತನರು, ಈಶಾನ್ಯ ರಾಜ್ಯದವರು, ಅವಿವಾಹಿತ ಸಂಗಾತಿಗಳು ಮತ್ತು ಮಾಂಸಾಹಾರಿಗಳು ಮೊದಲಾದವರ ಕುರಿತಾಗಿ ತಾರತಮ್ಯ ವ್ಯಕ್ತವಾಗುತ್ತಿರುವ ಬಗ್ಗೆ ಮಸೂದೆ ಮಂಡನೆಯ ಸಂದರ್ಭದಲ್ಲಿ ಶಶಿ ತರೂರು ಉಲ್ಲೇಖಿಸಿದ್ದಾರೆ.

ಈ ಮಸೂದೆ ಸಂಸದೀಯ ಸಮಿತಿಯ ಮುಂದೆ ಬಂದು ಸಂಸತ್ತಿನಲ್ಲಿ ಅಂಗೀಕಾರವಾಗಲು ವಿಪಕ್ಷ ಮತ್ತು ಕೇಂದ್ರ ಸರ್ಕಾರದ ಸಕ್ರಿಯ ಬೆಂಬಲದ ಅಗತ್ಯವಿದೆ. ಸಂಸತ್ತಿನಲ್ಲಿ ಇದು ವಾಸ್ತವದಲ್ಲಿ ಅಂಗೀಕಾರವಾದಲ್ಲಿ ಸಂಸತ್ತಿನ ಇತಿಹಾಸದಲ್ಲೇ ಕಾಯ್ದೆಯಾದ ಎರಡನೇ ಖಾಸಗಿ ಸದಸ್ಯ ಮಸೂದೆ ಇದಾಗಲಿದೆ.

ಈ ಮಸೂದೆಯಲ್ಲಿ ವಿವಿಧ ರೀತಿಯಲ್ಲಿ ಭಾರತೀಯ ಸಮಾಜದಲ್ಲಿ ಅನುಸರಿಸಲಾಗುತ್ತಿರುವ ತಾರತಮ್ಯದ ಬಗ್ಗೆ ವಿವರಿಸಲಾಗಿದೆ. ನೇರ ತಾರತಮ್ಯದ ಅಡಿಯಲ್ಲಿ ದಲಿತ ಅಭ್ಯರ್ಥಿಯ ಸಂದರ್ಶನ ಮಾಡಲು ಮಾಲೀಕರು ವಿರೋಧಿಸುವುದು ಜಾತಿಯಾಧಾರಿತ ತಾರತಮ್ಯ ಎಂದು ಉಲ್ಲೇಖಿಸಲಾಗಿದೆ. ವಿವಾಹಿತ ಮಹಿಳೆಯನ್ನು ಕೆಲಸದಿಂದ ತೆಗೆದುಹಾಕುವುದು, ಆಸ್ಪತ್ರೆಯಲ್ಲಿ ಮಹಿಳಾ ನರ್ಸುಗಳನ್ನೇ ಆರಿಸುವುದು ಲಿಂಗಾಧರಿತ ತಾರತಮ್ಯದಲ್ಲಿದೆ. ಮನೆ ಮಾಲೀಕರು ವಿವಾಹಿತರಿಗೆ ಮಾತ್ರ ಮನೆ ಬಾಡಿಗೆ ಕೊಡುವುದು ವಿವಾಹವಾಧರಿತ ತಾರತಮ್ಯ ಎಂದು ಮಸೂದೆ ಹೇಳಿದೆ. ಹಾಗೆಯೇ ಜನಾಂಗೀಯ ಮತ್ತು ಪ್ರಾದೇಶಿಕ ತಾರತಮ್ಯದ ಬಗ್ಗೆಯೂ ಉಲ್ಲೇಖಿಸಲಾಗಿದೆ.

ಪರೋಕ್ಷ ತಾರತಮ್ಯದಲ್ಲಿ ಕಾರ್ಯಸ್ಥಳದಲ್ಲಿ ಸಮಾನ ಕೆಲಸದಲ್ಲಿ ಅರೆಕಾಲಿಕ ಮತ್ತು ಶಾಶ್ವತ ಉದ್ಯೋಗಿಗಳಿಗೆ ವಿಭಿನ್ನ ವೇತನ ನೀಡುವುದು, ಲಿಂಗಾಧರಿತವಾಗಿ ವಿಭಿನ್ನ ವೇತನ, ಅಪಾರ್ಟಮೆಂಟುಗಳನ್ನು ಉನ್ನತ ಪದವೀಧರರಿಗೆ ಮಾತ್ರ ಮೀಸಲಿಡುವುದು, ಬಹಳಷ್ಟು ಕಟುಕರು ಮುಸ್ಲಿಮರೇ ಆಗಿರುವ ಕಾರಣ ಧರ್ಮದ ತಾರತಮ್ಯದಲ್ಲಿ ಕಟುಕರಿಗೆ ಹಾಲು ಮಾರದ ಮಳಿಗೆಗಳು ಮೊದಲಾಗಿ ಹಲವು ತಾರತಮ್ಯಗಳನ್ನು ಪಟ್ಟಿಮಾಡಲಾಗಿದೆ.

ಆಟವಾಡಲು ಒಪ್ಪದ ಶಾಲಾ ಬಾಲಕನ ಬಗ್ಗೆ ಅದ್ಯಾಪಕಿ ತೋರುವ ನಕಾರಾತ್ಮಕ ವರ್ತನೆ, ದಲಿತ ವರ್ಗದ ನೌಕರ ಮಾಡುತ್ತಿದ್ದ ಕೆಲಸವನ್ನು ಮಾಡಲು ಮತ್ತೊಬ್ಬರು ಬಂದಾಗ ಪವಿತ್ರ ಜಲ ಪ್ರೋಕ್ಷಣೆ ಮಾಡುವುದು ಮೊದಲಾದುವನ್ನು ದೌರ್ಜನ್ಯದ ತಾರತಮ್ಯವೆಂದು ಉಲ್ಲೇಖಿಸಲಾಗಿದೆ.

ವಿಭಿನ್ನ ಧರ್ಮಗಳಿಗೆ ಸೇರಿದ ದಂಪತಿಗಳ ಕುಟುಂಬಗಳ ಜೊತೆಗೆ ವ್ಯವಹಾರವನ್ನು ವಿರೋಧಿಸುವ ಕಾಪ್ ಪಂಚಾಯತ್ ಬಹಿಷ್ಕಾರದ ತಾರತಮ್ಯದ ಅಡಿಯಲ್ಲಿ ಬರುತ್ತದೆ.

ಉನ್ನತ ಹಿಂದೂ ವರ್ಗಕ್ಕೆ ಪ್ರತ್ಯೇಕ ಕ್ಯಾಂಟೀನ್ ನಡೆಸುವ ಸಂಸ್ಥೆ, ಹಿಂದೂ ಹುಡುಗನನ್ನು ಮುಸ್ಲಿಂ ಯುವತಿಯ ಜೊತೆಗೆ ಸಂಬಂಧವಿಡದಂತೆ ಒತ್ತಡ ಹೇರುವುದು, ಪ್ರಬುದ್ಧ ಅವಿವಾಹಿತ ಸಂಗಾತಿಗಳು ಉದ್ಯಾನವನದಲ್ಲಿ ಜೊತೆಯಾಗಿರುವಾಗ ಸಾಮೂಹಿಕ ವಿರೋಧ ವ್ಯಕ್ತಪಡಿಸಿ ರಾಖಿ ಕಟ್ಟಿಸುವುದು, ಪ್ರೇಮದ ಕಾರಣಕ್ಕೆ ಯುವತಿಯ ಓಡಾಟಕ್ಕೆ ಮನೆಯವರು ತಡೆಯೊಡ್ಡುವುದು ಮೊದಲಾದುವು ಪ್ರತ್ಯೇಕಗೊಳಿಸುವ ತಾರತಮ್ಯದಡಿ ಉಲ್ಲೇಖಗೊಂಡಿವೆ.

ದಲಿತ ವರ್ಗದ ಮಹಿಳೆಯ ಬಟ್ಟೆ ಬಿಚ್ಚಿ ಗ್ರಾಮದಲ್ಲಿ ನಗ್ನ ಮೆರವಣಿಗೆ ಮಾಡುವಂತಹ ಪ್ರಕರಣವನ್ನು ಜಾತಿ ಮತ್ತು ಲಿಂಗ ಆಧಾರಿತ ತಾರತಮ್ಯದ ಹಿಂಸೆ ಎಂದು ಉಲ್ಲೇಖಿಸಲಾಗಿದೆ.

ಈಗಿರುವ ಕಾನೂನುಗಳು ಪ್ರಜೆಗಳನ್ನು ಇಂತಹ ತಾರತಮ್ಯಗಳಿಂದ ರಕ್ಷಿಸಲು ವಿಫಲವಾಗಿವೆ. ಈಗಿನ ಕಾನೂನಿನಲ್ಲಿ ಸಂವಿಧಾನಬದ್ಧವಾಗಿ ತಾರತಮ್ಯದಿಂದ ರಕ್ಷಿಸಲು ಇರುವ ಪರಿಚ್ಛೇದ 14, 15, 16 ಮತ್ತು 17 ಸಾಕಷ್ಟು ಬಲಿಷ್ಠವಾಗಿಲ್ಲ. ಹೀಗಾಗಿ ಹೆಚ್ಚುವರಿ ಶಾಸನಾತ್ಮಕ ರಕ್ಷಣೆಯ ಅಗತ್ಯವಿದೆ ಎಂದು ಶಶಿ ತರೂರು ಅಭಿಪ್ರಾಯಪಟ್ಟಿದ್ದಾರೆ.