ಗಂಡನ ಮನೆಗೆ ಪುನಃ ಹೋಗಬೇಕೇ?

ಪ್ರ : ನನಗೆ ಮದುವೆಯಾಗಿ ಆರು ವರ್ಷಗಳಾದವು. ಮಕ್ಕಳಾಗಿಲ್ಲ ಅನ್ನುವ ಕೊರತೆ ನನ್ನನ್ನು ಬಹಳವಾಗಿ ಕಾಡುತ್ತಿತ್ತು. ಅಂತೂ ಕೊನೆಗೂ ಗರ್ಭಿಣಿಯಾದೆ. ನನ್ನ ಗಂಡ ಹೆಚ್ಚಾಗಿ ಟೂರಿನಲ್ಲಿಯೇ ಇರುತ್ತಾರೆ. ನಾನು ಬಸಿರಾಗಿದ್ದು ಅವರಿಗೆ ಮೊದಲು ಸಂತಸ ನೀಡಿದರೂ ನನಗೆ ಐದು ತಿಂಗಳಾದ ನಂತರ ಅವರಿಗೆ ನನ್ನ ಮೇಲೆ ಸಂಶಯ ಕಾಡಲು ಶುರುವಾಯ್ತು. ಅದಕ್ಕೆ ಕಾರಣ ಅವರ ಅಕ್ಕ. ಅವಳು ಗಂಡನನ್ನು ಬಿಟ್ಟು ನಮ್ಮ ಜೊತೆ ಬಂದು ಇದ್ದಳು. ಅವಳಿಗೆ ಮಕ್ಕಳಿಲ್ಲ. ನನ್ನನ್ನು ಕಂಡರೆ ಅವಳಿಗೆ ಹೊಟ್ಟೆಯುರಿ. ತಮ್ಮನಿಗೆ ಏನೇನೋ ಹೇಳಿಕೊಟ್ಟು ಅವರಿಗೆ ನನ್ನ ಬಗ್ಗೆ ಸಂಶಯ ಮೂಡುವಂತೆ ಮಾಡಿದ್ದಳು. ನನಗೆ ಯಾರ್ಯಾರದೋ ಜೊತೆ ಸಂಬಂಧ ಕಲ್ಪಿಸಿ ಈ ಮಗು ಅವರದ್ದಲ್ಲ ಅಂತ ಹೇಳಿಕೊಟ್ಟಿದ್ದಾಳೆ. ನನ್ನ ಗಂಡನೂ ಹಿತ್ತಾಳೆ ಕಿವಿಯವರು. ತಾನು ಊರಲ್ಲಿ ಇಲ್ಲದಾಗ ಯಾರಿಗೋ ನಾನು ಬಸಿರಾಗಿದ್ದೇನೆ ಅಂತ ಅವರೂ ನನ್ನ ಜೊತೆ ಜಗಳವಾಡಲು ಶುರುಮಾಡಿದರು. ಅವರಿಗೆ ಯಾವ ವಿಧದಲ್ಲಿ ಹೇಳಿದರೂ ಅರ್ಥವಾಗಿರಲಿಲ್ಲ. ನನ್ನ ಬವಣೆ ನೋಡಿ ನನ್ನ ತವರಿನವರು ಆರು ತಿಂಗಳಿಗೇ ನನ್ನನ್ನು ಕರೆದುಕೊಂಡು ಹೋದರು. ಮಗುವಾಗುತ್ತಿರುವ ಸಂತಸವೆಲ್ಲ ನನ್ನಿಂದ ದೂರವಾಯಿತು. ಕಣ್ಣೀರೇ ನನಗೆ ನಿತ್ಯ ಸಂಗಾತಿಯಾಯಿತು. ಅಂತೂ ಅದೇ ನೋವಿನಲ್ಲಿ ಮಗ ಹುಟ್ಟಿದ. ಮಗುವಿಗೀಗ ಮೂರು ತಿಂಗಳು. ತವರು ಮನೆಯಲ್ಲಿ ಇದ್ದೇನೆ. ಇನ್ನು ಇಲ್ಲೇ ಇದ್ದು ಯಾವುದಾದರೂ ನೌಕರಿಗೆ ಸೇರಿಕೊಂಡು ನನ್ನ ಜೀವನ ನಾನು ನೋಡಿಕೊಳ್ಳೋಣ ಅನ್ನುವ ಆಲೋಚನೆಯಲ್ಲಿ ಇದ್ದೆ. ಆದರೆ ಇದ್ದಕ್ಕಿದ್ದ ಹಾಗೆ ನನ್ನ ಗಂಡ ಕಳೆದ ವಾರ ನಮ್ಮ ಮನೆಗೆ ಬಂದು ತಾನು ಹೇಳಿದ್ದೆಲ್ಲವನ್ನೂ ಮರೆತು ತನ್ನ ಜೊತೆ ಬರುವಂತೆ ಕರೆಯುತ್ತಿದ್ದಾರೆ. ಅವರಿಗೆ ತನ್ನ ತಪ್ಪಿನ ಅರಿವಾಗಿದೆಯೆಂದೂ ಹೇಳುತ್ತಿದ್ದಾರೆ. ನಾನು ಗರ್ಭಿಣಿಯಾದಾಗ ಕೊಟ್ಟ ನೋವನ್ನು ಹೇಗೆ ಮರೆಯಲಿ? ನನ್ನ ಅಮ್ಮ, ಅಪ್ಪ ಅವರ ಜೊತೆ ಹೋಗುವುದೇ ಒಳ್ಳೆಯದು ಅನ್ನುತ್ತಿದ್ದಾರೆ. ನನ್ನ ಸ್ವಾಭಿಮಾನಕ್ಕೇ ಧಕ್ಕೆ ತಂದ ಅವರನ್ನು ಕ್ಷಮಿಸಬೇಕೇ? ಪುನಃ ಅಲ್ಲಿಗೆ ಕಾಲಿಡಬೇಕೇ?

ಉ : ಯಾರನ್ನು ನಂಬಿಕೊಂಡು ಇಡೀ ಜೀವನ ಕಳೆಯಬೇಕೆಂದು ಬಂದಿರುತ್ತಾರೋ ಅವರೇ ಅಪನಂಬಿಕೆ ತೋರಿ ಮಾನಸಿಕ ಹಿಂಸೆ ನೀಡಿದರೆ ಆ ಹೆಣ್ಣಿನ ನೋವು ನಿಜಕ್ಕೂ ಅಸಹನೀಯವೇ. ಗಂಡ-ಹೆಂಡಿರ ಮಧ್ಯೆ ಎಲ್ಲಕ್ಕಿಂತ ಮುಖ್ಯವಾಗಿ ಬೇಕಿರುವುದು ವಿಶ್ವಾಸ. ಯಾರೋ ಏನೋ ಹೇಳಿದರು ಅಂದಾಕ್ಷಣ ಕಟ್ಟಿಕೊಂಡ ಹೆಂಡತಿಯನ್ನೇ ಸಂಶಯಿಸುವುದು ಅವಳ ಸ್ವಾಭಿಮಾನಕ್ಕೇ ಹೊಡೆತ ಕೊಟ್ಟ ಹಾಗೆ. ಸಂಗಾತಿಗಳಿಗೆ ಮೋಸ ಮಾಡುವ ಕೆಲವರಿರಬಹುದು. ಹಾಗಂತ ಸರಿಯಾದ ಪುರಾವೆಯೂ ಇಲ್ಲದೇ ತನ್ನ ಅಕ್ಕ ಹೇಳುತ್ತಾಳೆ ಅಂತ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿರುವವರ ರೀತಿಯಲ್ಲಿ ನೀವು ಮನೆ ಬಿಟ್ಟೇ ಹೋಗುವಂತೆ ನಿವiಗೆ ನೋವು ಕೊಟ್ಟಿದ್ದು ಅಕ್ಷಮ್ಯ. ಗಂಡನ ಪ್ರೀತಿಯಿಲ್ಲದೇ ಗರ್ಭಿಣಿಯಿದ್ದಾಗ ನೀವು ಅನುಭವಿಸಿದ ಮಾನಸಿಕ ಯಾತನೆಯನ್ನು ನಿಮಗೆ ಮರೆಯುವುದು ಕಷ್ಟವೇ. ಆದರೂ ಮುಂದಿನ ಜೀವನದ ಬಗ್ಗೆಯೂ ಯೋಚಿಸಬೇಕಲ್ಲಾ. ನಿಮ್ಮ ಮಗುವಿಗೆ ತಂದೆಯ ಪ್ರೀತಿಯೂ ಬೇಕಲ್ಲಾ. ಈಗ ಅವರಾಗಿಯೇ ತಪ್ಪು ಅರಿವಾಗಿ ನಿಮ್ಮನ್ನು ಕರೆಯಲು ಬಂದಾಗ ಹೋಗದೇ ಇರುವುದೂ ನಿಮ್ಮ ಭವಿಷ್ಯದ ದೃಷ್ಟಿಯಿಂದ ಸರಿಯಲ್ಲ. ಆದರೂ ಅವರಿಂದ ನೀವು ಸರಿಯಾದ ಭರವಸೆ ತೆಗೆದುಕೊಳ್ಳಲೇ ಬೇಕು. ಮುಂದೆ ಅದೇ ಅಕ್ಕ ಏನಾದರೂ ನಿಮ್ಮ ಬಗ್ಗೆ ಚಾಡಿ ಹೇಳಿ ನಿಮ್ಮನ್ನು ಅವರಿಂದ ದೂರ ಮಾಡಿದರೆ? ಮೊದಲು ಅವಳಿಗೊಂದು ಜೀವನಕ್ಕೆ ದಾರಿ ಮಾಡಿಕೊಡಲು ಹೇಳಿ. ಯಾವ ಕಾರಣಕ್ಕೂ ಅವಳು ನಿಮ್ಮ ಮಧ್ಯೆ ಬರಬಾರದೆಂದೂ ಹೇಳಿ. ನಿಮ್ಮ ತಂದೆ-ತಾಯಿಯೆದುರು ಅವರು ನಿಮ್ಮನ್ನು ಮತ್ತು ಮಗುವನ್ನು ಚೆನ್ನಾಗಿ ನೋಡಿಕೊಳ್ಳುವ ಭರವಸೆಯನ್ನು ನೂರಕ್ಕೆ ನೂರು ಕೊಟ್ಟ ನಂತರವೇ ಗಂಡನ ಮನೆಗೆ ಕಾಲಿಡಿ.