ಅಮಿತ್ ಶಾ ಜಿಲ್ಲೆ ಭೇಟಿಯ ಹಿಂದೆ ಹಿಂದೂ ಮತ ಸೆಳೆಯುವ ಉದ್ದೇಶ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಫೆಬ್ರವರಿ 18ರಿಂದ 21ರ ತನಕ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಭೇಟಿ ನೀಡಲಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಈ ಮೂರು ಜಿಲ್ಲೆಗಳಲ್ಲಿಯೂ  ಈ ಹಿಂದೆ  ಕಾಂಗ್ರೆಸ್ ಗೆದ್ದ ಕ್ಷೇತ್ರಗಳಲ್ಲಿ ಹಿಂದೂ ಮತಗಳನ್ನು ಸೆಳೆಯುವ ಪ್ರಯತ್ನ ನಡೆಸಲಿದ್ದಾರೆಂದು ನಿರೀಕ್ಷಿಸಲಾಗಿದೆ.

ಶಾ ಅವರ ಹೆಚ್ಚಿನ ಎಲ್ಲಾ ಕಾರ್ಯಕ್ರಮಗಳು ಕಾಂಗ್ರೆಸ್ ಶಾಸಕರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳಲ್ಲಿ ನಡೆಯಲಿದೆ. ಶಾ ತಮ್ಮ ಭೇಟಿಯ ವೇಳೆ

ಬಂಟ್ವಾಳ, ಮಂಗಳೂರು ಉತ್ತರ, ಪುತ್ತೂರು, ಉಡುಪಿ, ಕಾಪು, ಕುಮಟಾ ಮತ್ತು ಭಟ್ಕಳ ಕ್ಷೇತ್ರಗಳಿಗೆ ಭೇಟಿ ನೀಡುವ ಕಾರ್ಯಕ್ರಮವಿದೆ.

ಬಂಟ್ವಾಳ ಹಾಗೂ ಕುಮಟಾಗಳಲ್ಲಿ ನಡೆಯಲಿರುವ  ನವಶಕ್ತಿ ಸಮಾವೇಶ ತಳ ಮಟ್ಟದ ಕಾರ್ಯಕರ್ತರ ಸಂಘಟನೆಯನ್ನು ಬಲಗೊಳಿಸುವ ಉದ್ದೇಶ ಹೊಂದಿದೆ. ಸುರತ್ಕಲಿನಲ್ಲಿ ಶಾ ಅವರು ಇತ್ತೀಚೆಗೆ ಕಾಟಿಪಳ್ಳದಲ್ಲಿ ಹತ್ಯೆಯಾದ ದೀಪಕ್ ರಾವ್  ನಿವಾಸಕ್ಕೆ ಭೇಟಿ ನೀಡಲಿದ್ದರೆ ಹೊನ್ನಾವರದಲ್ಲಿ ಪರೇಶ್ ಮೇಸ್ತಾ ನಿವಾಸಕ್ಕೆ ಭೇಟಿ ಕೊಡಲಿದ್ದಾರೆ.

ಕಾಂಗ್ರೆಸ್ಸಿನ ಮೊಯ್ದೀನ್ ಬಾವ ಪ್ರತಿನಿಧಿಸುವ ಮಂಗಳೂರು ಉತ್ತರ ಹಾಗೂ ಸಚಿವ ರಮಾನಾಥ ರೈ ಅವರ ಬಂಟ್ವಾಳ ಕ್ಷೇತ್ರದಲ್ಲಿ ಶಾ ಅವರು ಹಿಂದುಗಳ ಮೇಲಿನ ದಾಳಿಗಳ ಬಗ್ಗೆ ಉಲ್ಲೇಖಿಸಲಿದ್ದಾರೆನ್ನಲಾಗಿದೆ.

ಬಿಜೆಪಿ ಗೆಲುವು ಸಾಧಿಸುವ ಆತ್ಮವಿಶ್ವಾಸ ಹೊಂದಿರದ ಕ್ಷೇತ್ರಗಳಲ್ಲಿಯೇ ಶಾ ಕಾರ್ಯಕ್ರಮಗಳು ನಡೆಯಲಿದ್ದು ಕಾರ್ಯಕರ್ತರ ಆತ್ಮಸ್ಥೈರ್ಯ ಹೆಚ್ಚಿಸುವ ಉದ್ದೇಶ ಈ  ಭೇಟಿಗಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. “ಮತೀಯ ಸಂಘರ್ಷಗಳು ಬಿಜೆಪಿಗೆ ಮುಳುವಾಗಬಹುದಾದರೂ ಹಿಂದುಗಳ ಮೇಲಿನ ದಾಳಿ ಸಾಧಕವಾಗಿ ಪರಿಣಮಿಸಿ ಪಕ್ಷಕ್ಕೆ ತಾನು ಹಿಂದುಗಳ ರಕ್ಷಕನೆಂದು ಹೇಳಿಕೊಳ್ಳಲು ಸಹಕಾರಿಯಾಗಬಹುದು” ಎಂದು ಮೂಲಗಳು ತಿಳಿಸಿವೆ.

ಉಡುಪಿಯ ಮಲ್ಪೆಯಲ್ಲಿ ಶಾ ಭಾಗವಹಿಸಲಿರುವ ಮೀನುಗಾರರ ಸಮಾವೇಶ ಹಾಗೂ ಮೇಸ್ತ ನಿವಾಸಕ್ಕೆ ಭೇಟಿಯ ಹಿಂದೆ ಮೀನುಗಾರ ಸಮುದಾಯವನ್ನು ಓಲೈಸುವ ಉದ್ದೇಶವಿರಬಹುದೆಂದು ಹೇಳಲಾಗುತ್ತಿದೆ.

ಉಡುಪಿ, ಕಾಪು, ಬೈಂದೂರು,  ಭಟ್ಕಳ ಹಾಗೂ ಕುಮಟಾದಲ್ಲಿ ಮೀನುಗಾರರ ಮತಗಳು ಬಿಜೆಪಿ ಗೆಲುವಿಗೆ ಸಹಕಾರಿಯಾಗಬಹುದೆನ್ನುವ ಲೆಕ್ಕಾಚಾರವೇ ಶಾ ಇಲ್ಲಿಗೆ ಭೇಟಿ ನೀಡಲು ಕಾರಣ.

ತಮ್ಮ ಜಿಲ್ಲಾ ಪ್ರವಾಸದ ವೇಳೆ ಬಿಜೆಪಿ ಅಧ್ಯಕ್ಷ ಉಡುಪಿ ಶ್ರೀ ಕೃಷ್ಣ ದೇಗುಲ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ತೆರಳಲಿದ್ದಾರೆ.

 

 

LEAVE A REPLY