1 ವರ್ಷದಲ್ಲಿ 16,000 ಪಟ್ಟು ಹೆಚ್ಚಿದ ಶಾ ಪುತ್ರನ ಆಸ್ತಿ : ಇದು ಬಿಜೆಪಿ ಚೀಫ್ ವ್ಯಾಪಾರ ಮಾದರಿ

ಬಿಜೆಪಿ ಅಧ್ಯಕ್ಷ ಅಮಿತ್ ಶಾ ನಡೆಸುತ್ತಿರುವ ವ್ಯಾಪಾರದ ಮಾದರಿಯ ಬಗ್ಗೆ ಕೂಡಲೇ ತನಿಖೆ ಆದೇಶಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಅಹವಾಲು ಸಲ್ಲಿಸಿರುವ ಕಾಂಗ್ರೆಸ್ ಪಕ್ಷ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಪುತ್ರ ಜಯ್ ಅಮಿತ್ ಭಾಯಿ ಶಾಗೆ ಸೇರಿದ ಉದ್ದಿಮೆ ಒಂದು ವರ್ಷದಲ್ಲಿ 16,000 ಪಟ್ಟು ಹೆಚ್ಚಿನ ಆಸ್ತಿಯನ್ನು ಗಳಿಸಿರುವುದನ್ನು ಅಕ್ರಮ ವ್ಯವಹಾರ ಎಂದು ಆರೋಪಿಸಿದೆ.

2014-15ರಲ್ಲಿ 50 ಸಾವಿರ ರೂ ಇದದ ಜಯ್ ಅಮಿತ್ ಶಾ ಉದ್ದಿಮೆಯ ವ್ಯಾಪಾರ ಈಗ 80 ಕೋಟಿ ರೂ ತಲುಪಿರುವುದನ್ನು ಕಾಂಗ್ರೆಸ್ ಪ್ರಸ್ತಾಪಿಸಿದೆ. ಜಯ್ ಶಾ ಸಹವರ್ತಿಯಾಗಿರುವ ಮತ್ತೊಂದು ಕಂಪನಿ ಕುಸುಮ್ ಫಿನ್ ಸರ್ವ್ 7 ಕೋಟಿ ರೂ  ಭಧ್ರತೆಯನ್ನು ಒದಗಿಸಿ ಕಾಲುಪುರ್ ವಾಣಿಜ್ಯ ಸಹಕಾರಿ ಬ್ಯಾಂಕಿನಿಂದ 25 ಕೋಟಿ ರೂ ಸಾಲ ಪಡೆದಿರುವುದು ವರದಿಯಾಗಿದೆ.

ಈ ವರದಿಗಳನ್ನು ಸುಳ್ಳು ಎಂದು ಹೇಳಿರುವ ಬಿಜೆಪಿ ಇದು ಮಾನ ಹಾನಿ ಮಾಡುವ ಉದ್ದೇಶದಿಂದಲೇ ಹರಡಿರುವ ಸುದ್ದಿ ಎಂದು ಬಣ್ಣಿಸಿದೆ. ಈ ಸುದ್ದಿಯನ್ನು ಪ್ರಕಟಿಸಿರುವ ವೈರ್ ವೆಬ್ ಪತ್ರಿಕೆ ಮತ್ತು ಅದರ ಸಂಪಾದಕರ ವಿರುದ್ಧ ಜಯ್ ಶಾ ನೂರುಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

ಜಯ್ ಶಾ ಉದ್ದಿಮೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ, ಮಾಡಿರುವ ಆರೋಪಗಳೆಲ್ಲವೂ ಕ್ಷುಲ್ಲಕವಾಗಿದ್ದು, ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಬಿಜೆಪಿ ಐಟಿ ಸೆಲ್ ಅಧ್ಯಕ್ಷ ಅಮಿತ್ ಮಾಲವೀಯ ಹೇಳಿದ್ದಾರೆ.  ಶಾ ಮಾದರಿಯ ವ್ಯಾಪಾರದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದ್ದು, ಕೂಡಲೇ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಮೂಲಕ ತನಿಖೆ ಆದೇಶಿಸಲು ಆಗ್ರಹಿಸಿದೆ.