ಅಮಿತ್ ಷಾ ಜಿಲ್ಲಾ ಪ್ರವಾಸ 1 ದಿನ ವಿಳಂಬ ?

ಕರಾವಳಿ ಅಲೆ ವರದಿ
ಶಿರಸಿ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಉ ಕ ಜಿಲ್ಲಾ ಪ್ರವಾಸ ಇದೀಗ 1 ದಿನ ವಿಳಂಬವಾಗುವ ಸಾಧ್ಯತೆ ಇದೆ. ಅದು ಅಂತಿಮವಾದರೆ ಶಿರಸಿ ಕಾರ್ಯಕ್ರಮ ರದ್ದಾಗುವ ಸಾಧ್ಯತೆ ಇದೆ.
ಮೊದಲು ಬಂದ ಮಾಹಿತಿ ಪ್ರಕಾರ ಫೆಬ್ರವರಿ 20ರಂದು ಹೊನ್ನಾವರದಲ್ಲಿ ಹತ್ಯೆಗೊಳಗಾದ ಯುವಕ ಪರೇಶ ಮೇಸ್ತಾ ಅವರ ಮನೆಗೆ ಹೋಗಿ ಕುಟುಂಬಕ್ಕೆ ಸಾಂತ್ವನ ಹೇಳುವುದು, ಬಳಿಕ ಹೊನ್ನಾವರ ಕಾರ್ಯಕರ್ತರ ಸಭೆ ನಡೆಸಿ ಕುಮಟಾದಲ್ಲಿ ಜಿಲ್ಲಾಮಟ್ಟದ ಪ್ರಮುಖರ, ಕಾರ್ಯಕರ್ತರ ಸಭೆ ನಡೆಸಿ, ಸಂಜೆ 5 ಗಂಟೆಗೆ ಶಿರಸಿಗೆ ಬರುವುದು, ಶಿರಸಿ ಮಾರಿಕಾಂಬಾ ದೇವಿ ದರ್ಶನ ಪಡೆದು ಸಂಜೆ 5.15 ಗಂಟೆಗೆ ಹುಬ್ಬಳ್ಳಿಯತ್ತ ಹೋಗಿ ಅಲ್ಲಿಂದ ವಿಶೇಷ ವಿಮಾನದಲ್ಲಿ ರಾತ್ರಿ 9 ಗಂಟೆಗೆ ದೆಹಲಿ ತಲುಪುವ ಕಾರ್ಯಕ್ರಮ ನಿಗದಿಯಾಗಿತ್ತು.
ರವಿವಾರ ಬಂದ ಹೊಸ ಮಾಹಿತಿ ಪ್ರಕಾರ, ಫೆಬ್ರವರಿ 20ರ ಬದಲು ಫೆಬ್ರವರಿ 21ರಂದು ಅಮಿತ್ ಶಾ ಷಾ ಅವರು ಹೊನ್ನಾವರ, ಕುಮಟಾಕ್ಕೆ ಬರುವ ನಿರೀಕ್ಷೆ ಇದೆ. ಆದರೆ ಶಿರಸಿ ಕಾರ್ಯಕ್ರಮ ರದ್ದಾಗುವ ಸಾಧ್ಯತೆ ಇದೆ.
ಶಿರಸಿ ಮಾರಿಕಾಂಬಾ ಜಾತ್ರೆಯು ಫೆಬ್ರವರಿ 27ರಂದು ಇರುವುದರಿಂದ ಫೆಬ್ರವರಿ 20ರಂದು ರಾತ್ರಿ 8 ಗಂಟೆತನಕ ಮಾತ್ರ ಶಿರಸಿ ದೇವಿ ದರ್ಶನ ದೇಗುಲದಲ್ಲಿರುತ್ತದೆ. ನಂತರ ದೇಗುಲಕ್ಕೆ ಬಾಗಿಲು ಹಾಕುವುದರಿಂದ ದೇವಿ ನೋಡಬೇಕೆಂದರೆ ಫೆಬ್ರವರಿ 27ರ ರಾತ್ರಿ ಅಥವಾ ಫೆಬ್ರವರಿ 28ರಂದು ಜಾತ್ರಾ ಗದ್ದುಗೆಗೆ ಬರಬೇಕು. ದೇಗುಲದಲ್ಲೇ ನೋಡಬೇಕೆಂದರೆ ಕನಿಷ್ಟ 20 ದಿನ ಕಾಯಬೇಕಾಗುತ್ತದೆ. ದೇವಿ ದೇವಸ್ಥಾನಕ್ಕೆ ಫೆಬ್ರವರಿ 21ರಿಂದ ಬಾಗಿಲು ಹಾಕುವುದರಿಂದ ಅಮಿತ್ ಶಾ ಬಂದರೂ ದೇವಿ ದರ್ಶನ ಸಿಗದ ಕಾರಣ ಶಿರಸಿ ಕಾರ್ಯಕ್ರಮವೇ ರದ್ದಾಗುವ ನಿರೀಕ್ಷೆ ಇದೆ. ಈ ಸಂಗತಿ ತಿಳಿದ ನಂತರ ಜಿಲ್ಲಾ ಪ್ರಮುಖರು ಮತ್ತು ಶಾಸಕರು, ರಾಜ್ಯ ಪ್ರಮುಖರ ಮೂಲಕ ಅಮಿತ್ ಶಾ ಷಾ ಅವರನ್ನು ಫೆಬ್ರವರಿ 20ರಂದೇ ಕರೆಸಿ, ಶಿರಸಿ ದೇವಿ ದರ್ಶನ ಮಾಡಿಸುವ ಪ್ರಯತ್ನ ನಡೆಸಿದ್ದಾರೆ. ಅದು ಎಷ್ಟು ಫಲ ಕೊಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

LEAVE A REPLY