ಬಿಜೆಪಿಯೇತರ ಶಾಸಕರ ವಿರುದ್ಧ ಚಾರ್ಜ್ ಶೀಟ್ ಸಿದ್ಧಪಡಿಸಲು ಪಕ್ಷದವರಿಗೆ ಅಮಿತ್ ಸೂಚನೆ

ಬೆಂಗಳೂರು : ತಮ್ಮ ಈ ಹಿಂದಿನ ಭೇಟಿಯಲ್ಲಿ `ಪುಟ ಪ್ರಮುಖ’ರನ್ನು ನೇಮಿಸುವಂತೆ ಪಕ್ಷದ ನಾಯಕರುಗಳಿಗೆ  ಸೂಚನೆ ನೀಡಿ ತಲೆ ಬಿಸಿ ತಂದಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಮ್ಮ ಲೇಟೆಸ್ಟ್ ಭೇಟಿಯಲ್ಲಿ ಇನ್ನೊಂದು ಮಹತ್ವದ ಕಾರ್ಯವನ್ನು ಇಲ್ಲಿನ ಪಕ್ಷದ ಪದಾಧಿಕಾರಿಗಳಿಗೆ ವಹಿಸಿದ್ದಾರೆ. ರಾಜ್ಯದ ಎಲ್ಲಾ ಬಿಜೆಪಿಯೇತರ ಶಾಸಕರ ವಿರುದ್ಧದ `ಚಾರ್ಜ್ ಶೀಟ್’ ತಯಾರಿಸುವಂತೆ ಅವರೀಗ ಸೂಚನೆ ನೀಡಿದ್ದಾರೆ.

ಫೆಬ್ರವರಿ ಅಂತ್ಯದೊಳಗೆ ಈ ಚಾರ್ಜ್ ಶೀಟ್ ರೆಡಿಯಾಗಬೇಕು ಹಾಗೂ ಮಾರ್ಚ್ ತಿಂಗಳಲ್ಲಿ ಚುನಾವಣಾ ಅಖಾಡ ಕಾವೇರುತ್ತಿದ್ದಂತೆಯೇ ಈ ಚಾರ್ಜ್ ಶೀಟ್ ಹೊತ್ತಗೆಯನ್ನು ಆಯಾಯ ಕ್ಷೇತ್ರಗಳ ಜನರಿಗೆ ವಿತರಿಸಿ ಅವರ ಶಾಸಕರ ಕಾರ್ಯವೈಖರಿಯನ್ನು ಬಹಿರಂಗಗೊಳಿಸಬೇಕೆಂಬುದೇ ಶಾ ಯೋಜನೆಯಾಗಿದೆ.

ಕಾಂಗ್ರೆಸ್, ಜೆಡಿ(ಎಸ್) ಹಾಗೂ ಇತರ ಪಕ್ಷಗಳ ಎಲ್ಲಾ ಶಾಸಕರುಗಳ ಪ್ರತ್ಯೇಕ ಚಾರ್ಜ್ ಶೀಟಿನಲ್ಲಿ ಅವರು ಇಲ್ಲಿಯ ತನಕ ಏನು ಕೆಲಸ ಮಾಡಿದ್ದಾರೆ, ಮಾಡಿಲ್ಲ, ಹಣ ದುರುಪಯೋಗ ಪ್ರಕರಣಗಳು, ಈಡೇರದ ಭರವಸೆಗಳು  ಮುಂತಾದವುಗಳು ಅಂಕಿ ಅಂಶಗೊಂದಿಗೆ ಒಳಗೊಳ್ಳಬೇಕೆಂದು ಶಾ ಹೇಳಿದ್ದಾರೆಂದು ತಿಳಿದು ಬಂದಿದೆ.

ತಾಲೂಕು ಘಟಕದ ಅಧ್ಯಕ್ಷರುಗಳಿಗೆ ಈ ಚಾರ್ಜ್ ಶೀಟ್ ಸಿದ್ಧಪಡಿಸುವ ಹೊಣೆ ವಹಿಸಲಾಗಿದ್ದು, ಯುವ ಮೋರ್ಚಾ ಪದಾಧಿಕಾರಿಗಳು ಮಾಹಿತಿ ಕಲೆ ಹಾಕುವ ಕೆಲಸ ಮಾಡಲಿದ್ದಾರೆ.

ಶಾ ಇಂತಹುದೇ ಪ್ರಯೋಗವನ್ನು ಉತ್ತರ ಪ್ರದೇಶದಲ್ಲಿ ಮಾಡಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಈಗ ಕರ್ನಾಟಕದಲ್ಲೂ ಅದೇ ಮಾದರಿ ಅನುಸರಿಸಲು ನಿರ್ಧರಿಸಿದ್ದಾರೆನ್ನಲಾಗುತ್ತಿದೆ.

 

 

LEAVE A REPLY