`ಪುಟ ಪ್ರಮುಖ’ರನ್ನು ನೇಮಿಸುವಂತೆ ಶಾ ನೀಡಿದ ಸೂಚನೆಗೆ ನಾಯಕರು ಕಕ್ಕಾಬಿಕ್ಕಿ

ಬೆಂಗಳೂರು : ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇತ್ತೀಚೆಗೆ ತಮ್ಮ ಬೆಂಗಳೂರು ಭೇಟಿಯ ಸಂದರ್ಭ ಪಕ್ಷದ ನಾಯಕರುಗಳಿಗೆ ನೀಡಿದ ಆದೇಶವೊಂದು ಎಲ್ಲರನ್ನೂ ಕಕ್ಕಾಬಿಕ್ಕಿಯಾಗಿಸಿದೆಯಂತೆ. ಬೂತ್ ಮಟ್ಟದಲ್ಲಿನ ಮತದಾರರ ಪಟ್ಟಿಯಲ್ಲಿನ ಪ್ರತಿಯೊಂದು ಪುಟದಲ್ಲಿ ನಮೂದಾಗಿರುವ ಮತದಾರರ ವಿವರಗಳನ್ನು ಪಡೆದು ಅವರನ್ನು ಪಕ್ಷದತ್ತ ಸೆಳೆಯಲು `ಪುಟ ಪ್ರಮುಖ’ರನ್ನು ನೇಮಿಸುವಂತೆ ಶಾ ನೀಡಿದ ಸೂಚನೆಯನ್ನು ಹೇಗಪ್ಪಾ ಜಾರಿಗೊಳಿಸುವುದೆಂಬ ಚಿಂತೆಯಲ್ಲಿ ಸದ್ಯ ಬಿಜೆಪಿ ನಾಯಕರಿದ್ದಾರೆ. ತನಗೆ ವಹಿಸಲಾದ ನಿರ್ದಿಷ್ಟ ಮತದಾರರ ಪಟ್ಟಿಯ ಪುಟದಲ್ಲಿರುವ ಹೆಸಗಳ ಮತದಾರರನ್ನು ವೈಯಕ್ತಿಕವಾಗಿ ಕಂಡು ಮಾತನಾಡಿಸಿ ಪಕ್ಷದ ಪರ ಪ್ರಚಾರ ನಡೆಸುವ ಜವಾಬ್ದಾರಿ ಪುಟ ಪ್ರಮುಖನದ್ದಾಗಿರುತ್ತದೆ.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 56,000 ಬೂತುಗಳಿದ್ದು, ಪ್ರತಿಯೊಂದು ಕ್ಷೇತ್ರದಲ್ಲಿ ಸರಾಸರಿ 250 ಬೂತುಗಳಿರುತ್ತವೆ. ಪ್ರತಿಯೊಂದು ಬೂತಿಗೆ ಸಂಬಂಧಪಟ್ಟ ಮತದಾರರ ಪಟ್ಟಿಯಲ್ಲಿ 30ರಿಂದ 40 ಪುಟಗಳಿದ್ದು ಪ್ರತಿ ಪುಟದಲ್ಲಿ 20ರಿಂದ 30 ಮತದಾರರ ಹೆಸರುಗಳಿರುತ್ತವೆ. ಹೀಗಿರುವಾಗ ಪ್ರತಿಯೊಂದು ಬೂತ್ ಮಟ್ಟದಲ್ಲಿ ಇಷ್ಟೊಂದು ಪ್ರಮುಖರನ್ನು ಹೊಂದುವುದು ಹೇಗೆ ಸಾಧ್ಯ ಎಂಬುದು ಬಿಜೆಪಿ ನಾಯಕರ ಪ್ರಶ್ನೆ.

ಗುಜರಾತ್ ರಾಜ್ಯದಲ್ಲಿ ಇಂತಹುದೇ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿತ್ತು. ಆದರೆ ಕರ್ನಾಟಕದಲ್ಲಿ ಬೂತ್ ಮಟ್ಟದಲ್ಲಿ ಇಷ್ಟೊಂದು ಪರಿಣಾಮಕಾರಿ ಕಾರ್ಯ ಅಸಾಧ್ಯವೆಂಬಂತಹ ಮಾತುಗಳು ಕೇಳಿ ಬರುತ್ತಿವೆ. ಮೇಲಾಗಿ ಚಾಮರಾಜನಗರ, ಬೆಂಗಳೂರು ಗ್ರಾಮೀಣ, ರಾಮನಗರ, ಮಂಡ್ಯ, ಚಿಕ್ಕಬಳ್ಳಾಪುರ ಮತ್ತು ಹಾಸನದಲ್ಲಿ ಪಕ್ಷ ಅಷ್ಟೊಂದು ಬಲಯುತವಾಗಿಲ್ಲ. ಕಳೆದ ಚುನಾವಣೆಯಲ್ಲ ಇಲ್ಲಿನ ಒಟ್ಟು 27 ಕ್ಷೇತ್ರಗಳ ಪೈಕಿ ಪಕ್ಷ ಒಂದೇ ಒಂದು ಸ್ಥಾನ ಗೆದ್ದಿಲ್ಲ.

ಶಾ ನಿರ್ದೇಶನದಂತೆ ಕಾರ್ಯನಿರ್ವಹಿಸಲು ಇನ್ನಷ್ಟು ಕಾಲಾವಕಾಶ ಕೋರಲು ಬಿಜೆಪಿ ನಾಯಕರು ನಿರ್ಧರಿಸಿದ್ದು, ಈ ಬಗ್ಗೆ ಬೆಂಗಳೂರಿಗೆ ಜನವರಿ 8ರಂದು ಶಾ ಮತ್ತೆ ಭೇಟಿ ಮಾಡಿದಾಗ ಮನವಿ ಮಾಡಲಾಗುವುದು ಎಂದು ತಿಳಿದುಬಂದಿದೆ.

 

LEAVE A REPLY