ಕಾರ್ಯಕರ್ತರನ್ನೇ ಕಣಕ್ಕಿಳಿಸಲು ಶಾ ನಿರ್ಧಾರ

ಕರಾವಳಿ ಬಿಜೆಪಿ ವಲಸಿಗರಲ್ಲಿ ಭಾರೀ ತಳಮಳ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಅಧಿಕಾರಕ್ಕಾಗಿ ವಲಸೆ ಬಂದವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಣೆ ಹಾಕದೇ ಪಕ್ಷದ ಕಾರ್ಯಕರ್ತರನ್ನೇ ಕಣಕ್ಕಿಳಿಸುವ ಅಮಿತ್ ಶಾ ಅವರ ನಿರ್ಧಾರ ಕರಾವಳಿ ಜಿಲ್ಲೆಯ ಬಿಜೆಪಿ ವಲಸಿಗರಲ್ಲಿ ಭಾರೀ ಕÀಳವಳಕ್ಕೆ ಕಾರಣವಾಗಿದೆ.

ಕಳೆದ ವಾರ ನವದೆಹಲಿಯಲ್ಲಿ ವಿಧಾನಸಭಾ ಚುನಾವಣೆಯ ಪೂರ್ವಸಿದ್ಧತೆಗಾಗಿ ರಾಜ್ಯದ ಸಂಸದರು, ಶಾಸಕರು ಹಾಗೂ ಬಿಜೆಪಿ ಪದಾಧಿಕಾರಿಗಳನ್ನು ಉದ್ದೇಶಿಸಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈ ಫರ್ಮಾನು ಹೊರಡಿಸಿದ್ದರು. ಈ ಇಡೀ ನಿರ್ಣಯದ ಹಿಂದೆ ಪಕ್ಷ ಬಲವಾಗಿರುವ ಕಡೆ ಪಕ್ಷದಲ್ಲಿ 6 ವರ್ಷಕ್ಕಿಂತ (ಅಂದರೆ ಹಿಂದಿನ ವಿಧಾನಸಭಾ ಚುನಾವಣೆಗಿಂತ ಪೂರ್ವದಲ್ಲಿ) ದುಡಿದ ಕಾರ್ಯಕರ್ತರನ್ನು ಕಣಕ್ಕಿಳಿಸುವ ಬಿಜೆಪಿಯ ಈ ಯೋಜನೆಯ ಹಿಂದೆ ಆರೆಸ್ಸೆಸ್ ಒತ್ತಡ ಇದೆಯೆನ್ನಲಾಗಿದೆ.

“ಪಕ್ಷ ಅಧಿಕಾರಕ್ಕೆ ಬರುತ್ತದೆ. ಹೀಗಾಗಿ ಗಾಳಿಯಿದ್ದಾಗ ತೂರಿಕೊಂಡು ಅಧಿಕಾರ ಹಿಡಿದುಕೊಳ್ಳುವ ವ್ಯಕ್ತಿಗಳು ಪಕ್ಷದ ಹಾಗೂ ಸಂಘ ಪರಿವಾರದ ಅನುಶಾಸನಕ್ಕೆ ಬದ್ಧರಾಗಿರುವುದಿಲ್ಲ. ಕಂಡ ಕಂಡವರಿಗೆ ಟಿಕೆಟ್ ನೀಡುವುದಾಗಿ ಹೇಳಿ ಯಡ್ಡಿಯೂರಪ್ಪ ಬಿಜೆಪಿಗೆ ಅನ್ಯ ಪಕ್ಷದವರನ್ನು ಸೇರಿಸಿಕೊಳ್ಳುತ್ತಿದ್ದಾರೆ. ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಯಡ್ಡಿ ಇದೇ ತಪ್ಪನ್ನು ಮಾಡಿ ಕರ್ನಾಟಕದಲ್ಲಿ ಆನಂದ ಅಸ್ನೋಟಿಕರ್ (ಕಾರವಾರದ ಮಾಜಿ ಸಚಿವ) ಮುಂತಾದವರು ಅಧಿಕಾರ

ಅನುಭವಿಸುತ್ತ ಬಂಡಾಯ ಎಬ್ಬಿಸಿ ಪಕ್ಷವನ್ನು ಪಾತಾಳಕ್ಕೆ ತಳ್ಳಿದರು. ಅವರು ಆರೆಸ್ಸೆಸ್ಸನ್ನೂ ಕ್ಯಾರೆ ಎನ್ನಲಿಲ್ಲ. ಹೀಗಿರುವಾಗ ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಬಾಗಿಲಿನಂತಿರುವ ಕರ್ನಾಟಕದಲ್ಲಿ ಈ ಬಾರಿ ಅವಕಾಶವಿದ್ದು, ಪಕ್ಷಾಂತರಿಗಳನ್ನು ಅಧಿಕಾರಕ್ಕೇರಿಸಿದರೆ ಅವರು ಪಕ್ಷದಲ್ಲಿ ಅಶಿಸ್ತು ಹರಡಿ ಪಕ್ಷವನ್ನು ಪ್ರಪಾತಕ್ಕೆ ತಳ್ಳುವುದು ಖಂಡಿತವೆಂದು ಆರೆಸ್ಸೆಸ್ ಎಚ್ಚರಿಕೆ ನೀಡಿತ್ತು” ಎಂದು ಬಿಜೆಪಿಯ ಹಿರಿಯರೊಬ್ಬರು ತಿಳಿಸಿದ್ದಾರೆ.

ಇನ್ನೂ ಒಂದು ಕಾರಣವೆಂದರೆ ಬಿಜೆಪಿಗೆ ಸೇರ್ಪಡೆಯಾಗುವ ಅನ್ಯಪಕ್ಷೀಯರು ತಾವೂ ಮೊದಲು ಆರೆಸ್ಸೆಸ್ಸಿನಲ್ಲಿ ಇದ್ದೆವು ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ಸಿನಲ್ಲಿದ್ದಾಗ ಬಿಜೆಪಿ `ಕೋಮುವಾದಿ’ ಎಂದು ಅರ್ಥೈಸುತ್ತಾರೆ. ಇಂಥ ಜನರಿಗೆ ಅಧಿಕಾರ ಕೊಟ್ಟಲ್ಲಿ ಬಿಜೆಪಿಯ ಹಿಂದುತ್ವದ ಅಜೆಂಡಾ ಮುನ್ನಡೆಸುವುದು ಅಸಾಧ್ಯವೆಂಬ ಭಾವನೆ ಆರೆಸ್ಸೆಸ್ ನಾಯಕರಿಗಿದೆ ಎನ್ನಲಾಗಿದೆ.

ಪಕ್ಷದ ಬದಲಾದ ಈ ವರಸೆ ಕರಾವಳಿ ಬಿಜೆಪಿಯಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಬಿಜೆಪಿಯನ್ನು ಟಿಕೆಟ್ ಭರವಸೆಯಿಂದ ನಾಯಕರ ಸಮ್ಮುಖದಲ್ಲಿ ಧ್ವಜ ಹಸ್ತಾಂತರಿಸಿ ಜೆಡಿಎಸ್ ಹಾಗೂ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಜಿಗಿದವರು ಆತಂಕಕ್ಕೆ ಒಳಗಾಗಿದ್ದಾರೆ. ಯಡ್ಡಿಯೂರಪ್ಪ, ಈಶ್ವರಪ್ಪ, ಕೇಂದ್ರ ಸಚಿವ ಅನಂತಕುಮಾರ, ಸಂಸದೆ ಶೋಭಾ ಕರಂದ್ಲಾಜೆ ಅವರು ತಮಗೆ ಟಿಕೆಟ್ ನೀಡುತ್ತಾರೆಂದು ನಂಬಿದವರಿಗೆ ಈಗ ಬಿಜೆಪಿಯ ಒಳತಂತ್ರ ಗೊತ್ತಾಗಿದೆ. ಬೇರೆ ಪಕ್ಷದಲ್ಲಿ ಇರುವವರಿಗೆ ಟಿಕೆಟ್ ಆಮಿಷ ಒಡ್ಡಿ ಬಿಜೆಪಿಗೆ ಸೆಳೆದುಕೊಂಡು ಉಳಿದ ಪಕ್ಷಗಳನ್ನು ಮೊದಲು ದುರ್ಬಲಗೊಳಿಸುವುದು. ನಂತರ ಪಕ್ಷಾಂತರಿಗಳಿಗೆ ಟಿಕೆಟ್ ನೀಡದೇ ಅವರನ್ನು `ತ್ರಿಶಂಕು’ ಸ್ಥಿತಿಯಲ್ಲಿ ಇಟ್ಟು ಅವರು ಮೂಲ ಪಕ್ಷಕ್ಕೂ ಮರಳಲಾಗದೇ, ಬಿಜೆಪಿಯಲ್ಲೂ ಇರಲಾಗದ ಸ್ಥಿತಿ ಉಂಟು ಮಾಡಿ ಅವರನ್ನು ಮೂಲೆಗುಂಪು ಮಾಡುವ ಕುತಂತ್ರಕ್ಕೆ ಬಿಜೆಪಿ ಕೈಹಾಕಿದೆ ಎಂಬ ಅರಿವು ಈಗ ಮೂಡಲಾರಂಭಿಸಿದೆ.

`ಬಿಜೆಪಿಯೇ ಒಂದು ಬ್ರ್ಯಾಂಡ್’

 ಬಿಜೆಪಿಯೇ ಒಂದು ಬ್ರ್ಯಾಂಡ್. ಅದರಿಂದ ಅಭ್ಯರ್ಥಿಗಳು ಗೆಲ್ಲುತ್ತಾರೆ ಹೊರತು ಅಭ್ಯರ್ಥಿಯಿಂದ ಪಕ್ಷ ಗೆಲ್ಲುವುದಿಲ್ಲ ಎಂಬುದು ಪಂಚರಾಜ್ಯದ ಚುನಾವಣೆಯಲ್ಲಿ ಸಿದ್ಧವಾಗಿದೆ. ಹೀಗಾಗಿ ಪಕ್ಷದ ಕಾರ್ಯಕರ್ತರನ್ನೇ ಗುರುತಿಸಿ ಎಂದು ಅಮಿತ್ ಶಾ ಹೇಳಿದ್ದಾರೆನ್ನಾಗಿದೆ.

ಅಧಿಕಾರದ ದುರಾಸೆಗೆ ಬಂದವರಿಗೆ ಜೊಂಬು

ಈಗಾಗಲೇ ಕಾಂಗ್ರೆಸ್ಸಿನಿಂದ ಅಧಿಕಾರ ಅನುಭವಿಸಿ, ಮತ್ತೆ ಅಧಿಕಾರ ದುರಾಸೆಯಿಂದ ಇದೀಗ ಉಡುಪಿಯಲ್ಲಿ ಬಿಜೆಪಿಗೆ ನೆಗೆದಿರುವ ಪಕ್ಷಾಂತರಿ ಪ್ರವೀಣ ಖ್ಯಾತಿಯ ಜಯಪ್ರಕಾಶ ಹೆಗ್ಡೆ ಟಿಕೆಟಿಗಾಗಿ ಕಾದು ಕುಳಿತಿದ್ದಾರೆ. ಟಿಕೆಟ್ ಹಂಚಿಕೆಯಲ್ಲಿ ಮೋದಿ-ಶಾ ಹಾಗೂ ಆರೆಸ್ಸೆಸ್ ಪ್ರಮುಖ ಪಾತ್ರ ವಹಿಸುವುದರಿಂದ ರಾಜ್ಯದ ನಾಯಕರನ್ನು ನಂಬಿಕೊಂಡು ಬಂದ ಸೋ ಕಾಲ್ಡ್ ಸಜ್ಜನ ಜೆಪಿಗೆ ಚೊಂಬೇ ಗತಿ ಎಂಬಂತಾಗಿದೆ ಎಂದು ಮೂಲ ಕಾರ್ಯಕರ್ತರು ಮುಸಿಮುಸಿ ನಗುತ್ತಿದ್ದಾರೆ.

ಉತ್ತರಪ್ರದೇಶ ಚುನಾವಣೆಯಲ್ಲಿ ಮೂಲಕಾರ್ಯಕರ್ತರಿಗೇ ಟಿಕೆಟ್

 ಇತ್ತೀಚೆಗೆ ನಡೆದ ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿ 402 ಕ್ಷೇತ್ರಗಳ ಪೈಕಿ ಸುಮಾರು 300 ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಮೂಲಕಾರ್ಯಕರ್ತರಿಗೇ ಟಿಕೆಟ್ ನೀಡಿದ್ದು, ಅವರಲ್ಲಿ ಸುಮಾರು 275ಕ್ಕೂ ಹೆಚ್ಚು ಜನ ಗೆಲುವು ಸಾಧಿಸಿದ್ದಾರೆ. ಬೇರೆ ಪಕ್ಷಗಳಿಂದ ಬಂದ (ಮಿತ್ರಪಕ್ಷಗಳಿಂದ ಸ್ಪರ್ಧಿಸಿದ ಕ್ಷೇತ್ರ ಹೊರತುಪಡಿಸಿ) ಸುಮಾರು 75 ಕ್ಷೇತ್ರಗಳಲ್ಲಿ ಪಕ್ಷದಿಂದ ಸ್ಪರ್ಧಿಸಿದ್ದರೂ ಅವರಲ್ಲಿ ಹೆಚ್ಚಿನವರು ಸೋತಿದ್ದು, ಅಮಿತ್ ಶಾ ಅವರ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನ ಹುಟ್ಟಿಸಿ ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡಲಾಗದು ಎಂದು ಅವರು ಕರ್ನಾಟಕದ ನಾಯಕರಿಗೆ ಸ್ಪಷ್ಟವಾಗಿ ಹೇಳಿದ್ದಾರೆನ್ನಲಾಗಿದೆ.