ಶಫಿ ನಮ್ಮನ್ನು ದಶಕದಿಂದ ಸಂಪರ್ಕಿಸಿಲ್ಲ : ಕುಟುಂಬಸ್ಥರು

`ಜಾಗತಿಕ ಭಯೋತ್ಪಾದಕ’ ಎಂಬ ಹಣೆಪಟ್ಟಿ ಹೊತ್ತ ಭಟ್ಕಳಿಗ

ವಿಶೇಷ ವರದಿ

ಭಟ್ಕಳ : ಇಸ್ಲಾಮಿಕ್ ಸ್ಟೇಟ್ ಸಂಘಟನೆಯೊಂದಿಗೆ ನಂಟು ಹೊಂದಿರುವುದಕ್ಕಾಗಿ ಅಮೆರಿಕಾದಿಂದ ಜಾಗತಿಕ ಭಯೋತ್ಪಾದಕರ ಪಟ್ಟಿಯಲ್ಲಿ ಸೇಪಡೆಗೊಳಿಸಲ್ಪಟ್ಟಿರುವ ಭಟ್ಕಳ ಮೂಲದ ಮೊಹಮ್ಮದ್ ಶಫಿ ಅರ್ಮಾರ್ ತಪ್ಪು ಮಾಡಿದ್ದೇ ಆದಲ್ಲಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿ. ಆತ ಕಳೆದೊಂದು ದಶಕಕ್ಕೂ ಹೆಚ್ಚು ಸಮಯದಿಂದ ಕುಟುಂಬದ ಜತೆ ಸಂಪರ್ಕದಲ್ಲಿಲ್ಲ, ಎಂದು ಆತನ ಕುಟುಂಬ ಸದಸ್ಯರು ಹೇಳಿಕೊಂಡಿದ್ದಾರೆ.

ಭಾರತವನ್ನು ಗುರಿಯಾಗಿಸಿ ಇಸ್ಲಾಮಿಕ್ ಸ್ಟೇಟ್ ನಡೆಸುತ್ತಿರುವ ಕೆಲ ಕಾರ್ಯಾಚರಣೆಗಳಲ್ಲಿ ಅರ್ಮಾರ್ ಪ್ರಮುಖ ಪಾತ್ರ ವಹಿಸುತ್ತಿದ್ದಾನೆಂದು ಅಮೆರಿಕಾದ ಟೆಶರಿ ಇಲಾಖೆ ಈಗಾಗಲೇ ಹೇಳಿದೆ.

ಅರ್ಮಾರ್ ಸಹೋದರ ಸುಲ್ತಾನ್ ಅಬ್ದುಲ್ ಖಾದಿರ್ ಅರ್ಮಾರ್ ಹಾಗೂ ಯಾಸೀನ್ ಭಟ್ಕಳ್ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಸ್ಥಾಪಕ ಸದಸ್ಯರಾಗಿದ್ದರು. ಅವರಿಬ್ಬರ ನಡುವೆ ಹಲವು ಭಿನ್ನಾಭಿಪ್ರಾಯಗಳಿದ್ದವೆನ್ನಲಾಗಿದೆ. ಯಾಸೀನ್ ಬಂಧನದ ನಂತರ ಸುಲ್ತಾನ್ ಸಿರಿಯಾದ ಕೊಬನೆಗೆ ಹೋಗಿ ಅಲ್ಲಿ ತನ್ನ ಕಿರಿಯ ಸಹೋದರ ಮೊಹಮ್ಮದ್ ಶಫಿ ಜತೆ ಸೇರಿಕೊಂಡಿದ್ದ. 2015ರಲ್ಲಿ ನಡೆದ ಒಂದು ಸಂಘರ್ಷದಲ್ಲಿ ಸುಲ್ತಾನ್ ಹತ್ಯೆಗೀಡಾಗಿದ್ದಾನೆಂದು ನಂಬಲಾಗಿದ್ದು, ನಂತರ ಶಫಿ ಈ ಜಿಹಾದಿ ಸಂಘಟನೆಯಲ್ಲಿ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದ್ದ.

ಇಬ್ಬರು ಸಹೋದರರೂ ಭಟ್ಕಳದಲ್ಲಿ ಹುಟ್ಟಿ ಬೆಳೆದಿದ್ದು ಅವರಿಗೆ ಮೂಲಭೂತವಾದಿ ಧಾರ್ಮಿಕ ವಿಚಾರಗಳ ಮೇಲೆ ಹೆಚ್ಚಿನ ಒಲವು ಇತ್ತು. ಮಾಧ್ಯಮಿಕ ಶಿಕ್ಷಣದ ನಂತರ ಶಫಿಯನ್ನು ಆತನ ಸಹೋದರನಂತೆ ಲಕ್ನೋದ ನದ್ವತ್-ಉಲ್-ಉಲ್ಲೆಮಾ ಸೆಮಿನರಿಗೆ ಕಳುಹಿಸಲಾಗಿತ್ತು. ಇಂಡಿಯನ್ ಮುಜಾಹಿದ್ದೀನ್ ಸದಸ್ಯರ ಬಂಧನವಾದ ನಂತರ 2008ರಲ್ಲಿ ಅವರಿಬ್ಬರೂ ಕರಾಚಿಗೆ ಪರಾರಿಯಾಗಿದ್ದರು.

ನಂತರ ಇಸ್ಲಾಮಿಕ್ ಸ್ಟೇಟ್ ಚಟುವಟಿಕೆಗಳಲ್ಲಿ ತಮ್ಮನ್ನು ಅವರು ತೊಡಗಿಸಿಕೊಂಡಿದ್ದರು. ಶಫಿ `ಅಂಜಾನ್ ಭಾಯಿ’ `ಗೊತ್ತಿಲ್ಲದ ಸಹೋದರ’ ಎಂದೂ ಕರೆಯಲ್ಪಡುತ್ತಿದ್ದ. ಇಷ್ಟೆಲ್ಲಾ ಬೆಳವಣಿಗೆಗಳ ನಂತರ ಆತನ ಕುಟುಂಬ ಆತ ಹಿಂದೆ ಬರುತ್ತಾನೆಂಬ ಆಶಾವಾದ ಕಳೆದುಕೊಂಡಿತ್ತು. ಸುಮಾರು ಮೂರು ವರ್ಷಗಳ ಹಿಂದೆ ಆತನ ತಂದೆ ತೀರಿಕೊಂಡಿದ್ದರು. ಆತನ ತಾಯಿ ವಯೋವೃದ್ಧೆಯಾಗಿದ್ದಾರೆ ಹಾಗೂ ಕಿರಿಯ ಸಹೋದರ ಭಟ್ಕಳದಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ.

ಭಟ್ಕಳದಲ್ಲಿ ಆತನ ಕುಟುಂಬ ಸದಸ್ಯರ್ಯಾರಿಗೂ ಆತನ ಬಗ್ಗೆ ಚರ್ಚೆ ನಡೆಸಲು ಇಷ್ಟವಿಲ್ಲ. “ಶಫಿ 2006ರಲ್ಲಿ ದುಬೈಗೆ ತೆರಳಿದ ನಂತರ ಎರಡು ವರ್ಷಗಳ ತನಕ ನಮ್ಮ ಜತೆ ಫೋನಿನಲ್ಲಿ ಸಂಪರ್ಕದಲ್ಲಿದ್ದ. ನಂತರ ಆತ ಕುಟುಂಬದ ಯಾವುದೇ ಸದಸ್ಯರನ್ನು ಸಂಪರ್ಕಿಸಿಲ್ಲ. ಒಂದು ದಶಕದಿಂದ ಆತನ ಜತೆ ಯಾವುದೇ ಸಂಪರ್ಕವಿಲ್ಲ” ಎಂದು ಶಫಿಯ ಕಿರಿಯ ಸಹೋದರ ಸಫ್ವಾನ್ ಅರ್ಮಾರ್ ಹೇಳುತ್ತಾನೆ.