ಮಕರವಿಳಕ್ಕು ಹಬ್ಬ: ನಾಳೆ ಬಾಗಿಲು ತೆರೆಯಲಿರುವ ಶಬರಿಮಲೆ ಅಯ್ಯಪ್ಪ ದೇವಳ

ಮಕರವಿಳಕ್ಕು ಹಬ್ಬಕ್ಕಾಗಿ ಶುಕ್ರವಾರ ಶಬರಿಮಲೆ ದೇವಸ್ಥಾನವು ಭಕ್ತರಿಗಾಗಿ ತೆರೆಯಲಿರುವುದರಿಂದ ಅಲ್ಲಿ ಶುಚಿತ್ವ ಕಾರ್ಯಗಳ ಭರದಿಂದ ಸಾಗುತ್ತಿವೆ.

ಪಟ್ಟಣಂತಿಟ್ಟ : ಶಬರಿಮಲೆಯ ಸ್ವಾಮಿ ಅಯ್ಯಪ್ಪ ದೇವಸ್ಥಾನವು ಮಕರವಿಳಕ್ಕು ಹಬ್ಬಕ್ಕಾಗಿ ಶುಕ್ರವಾರ ಅಪರಾಹ್ನದಿಂದ ಭಕ್ತರಿಗಾಗಿ ತೆರೆಯಲಿದೆ. ಈಗಾಗಲೇ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳ ವಿವಿಧೆಡೆಗಳಿಂದ ನೂರಾರು ಭಕ್ತಾದಿಗಳು ಶಬರಿಮಲೆ ತಲುಪಿದ್ದಾರೆ. ಮಂಡಲಂ ಹಬ್ಬದ ನಂತರ ದೇವಳ ಎರಡು ದಿನ ಮುಚ್ಚಿರುವುದೆಂದು ಹೆಚ್ಚಿನ ಭಕ್ತರಿಗೆ ತಿಳಿಯದಾಗಿದ್ದು ಅವರೆಲ್ಲಾ ಪಂಪ ಮತ್ತು ನಿಲಕ್ಕಲ್ ಪ್ರದೇಶಗಳಲ್ಲಿ  ತಂಗಿದ್ದಾರೆ.

ದೇವಳದ ಅರ್ಚಕರ ಮುಖ್ಯಸ್ಥರಾಗಿರುವ ಟಿ ಎಂ ಉನ್ನಿಕೃಷ್ಣನ್ ನಂಬೂದಿರಿ ಶುಕ್ರವಾರ ಸಂಜೆ 5 ಗಂಟೆಗೆ ಗರ್ಭಗುಡಿಯ ಬಾಗಿಲುಗಳನ್ನು ತೆರೆಯಲಿದ್ದಾರೆ. ಈ ಸಂಬಂಧ ಧಾರ್ಮಿಕ ಪ್ರಕ್ರಿಯೆಗಳು ಶುಕ್ರವಾರ ಬೆಳಗ್ಗಿನಿಂದಲೇ ಆರಂಭಗೊಳ್ಳಲಿದ್ದು ಪ್ರಧಾನ ಅರ್ಚಕ ಕಂಡರರು ರಾಜೀವರರು ಅವರು ಗಣಪತಿ ಹೋಮ ನಡೆಸಲಿದ್ದು ಇದಾದ ನಂತರ ಅಷ್ಟಾಭಿಷೇಕಂ ಹಾಗೂ ಉಷಾಪೂಜ ನೆರವೇರಲಿದೆ.

ವಾರ್ಷಿಕ ಮಕರವಿಳಕ್ಕು ಹಬ್ಬವನ್ನು ಜನವರಿ 14ರಂದು ಆಚರಿಸಲಾಗುವುದು.