ಸೆಕ್ಸ್ ಕಾರ್ಯಕರ್ತರೂ ಇದೀಗ ಕ್ಯಾಶ್ ಲೆಸ್

ಕೊಲ್ಕತ್ತಾ : ನೋಟು ಅಮಾನ್ಯೀಕರಣಗೊಂಡು 50 ದಿನಗಳಾಗಿವೆ. ಇತ್ತೀಚಿಗಿನ ದಿನಗಳಲ್ಲಿ ಹೆಚ್ಚೆಚ್ಚು ವ್ಯಾಪಾರಿಗಳು ಕ್ಯಾಶ್ ಲೆಸ್ ವ್ಯವಹಾರಗಳತ್ತ ಮುಖ ಮಾಡುತ್ತಿದ್ದಾರೆ. ಅಂತೆಯೇ ಏಷ್ಯಾ ಖಂಡದ ಅತಿ ದೊಡ್ಡ ಕೆಂಪು ದೀಪ ಪ್ರದೇಶವಾದ ಕೊಲ್ಕತ್ತಾದ ಸೊನಾಗಚಿಯ ಲೈಂಗಿಕ ಕಾರ್ಯಕರ್ತೆಯರೂ ಕ್ಯಾಶ್ ಲೆಸ್ ಆಗುವತ್ತ ಹೆಜ್ಜೆಯಿಡುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ಇಲ್ಲಿ ಎಲ್ಲವೂ ನಗದು ವ್ಯವಹಾರವೇ ಆಗಿತ್ತು ಹಾಗೂ ತಮ್ಮಲ್ಲಿ ಬರುವ ಗ್ರಾಹಕರ ಬಳಿ ಚೇಂಜ್ ಇಲ್ಲದೇ ಇದ್ದಾಗ ಲೈಂಗಿಕ ಕಾರ್ಯಕರ್ತೆಯರು ಚೇಂಜ್ ನೀಡಿಯೂ ಸಹಕರಿಸುತ್ತಿದ್ದರು. ಆದರೆ ದಿನ ಕಳೆದ ಹಾಗೆ ನಗದು ಕೊರತೆಯ ಬಿಸಿ ಅವರನ್ನೂ ತಟ್ಟಲು ಆರಂಭಿಸಿದ್ದು ಇಲ್ಲಿನ ಸುಮಾರು 10,000 ಲೈಂಗಿಕ ಕಾರ್ಯಕರ್ತೆಯರು  ಕ್ರಿಸ್ಮಸ್ ನಂತರ  ಪೇಟಿಎಂ ಹಾಗೂ ಕಾರ್ಡ್ ಸ್ವೈಪಿಂಗ್ ಮೆಶೀನುಗಳಿಗೆ ಮೊರೆ ಹೋಗಿದ್ದಾರೆ.

ಇಲ್ಲಿನ ಲೈಂಗಿಕ ಕಾರ್ಯಕರ್ತೆಯರ ಬಳಿ ಗ್ರಾಹಕರನ್ನು ಕರೆದುಕೊಂಡು ಬರುವ ಬಿಹಾರ ಮೂಲದ ವ್ಯಕ್ತಿಯೊಬ್ಬನÀ ಪ್ರಕಾರ “ಇಲ್ಲಿ ರಾತ್ರಿ ಕಳೆದ ವ್ಯಕ್ತಿಯೊಬ್ಬನಿಗೆ ರೂ 6000 ದರ ವಿಧಿಸಲಾಗುತ್ತದೆ. ಆದರೆ ಎಟಿಎಂನಿಂದ ಕೇವಲ ರೂ 2000 ಹಾಗೂ ಬ್ಯಾಂಕುಗಳು ದಿನವೊಂದಕ್ಕೆ ರೂ 2500 ಮಾತ್ರ ನೀಡುತ್ತಿದ್ದುದರಿಂದ ನಾವು ಪೇಟಿಎಂ ಮೊರೆ ಹೋಗಬೇಕಾಯಿತು.”

“ಸಿಗರೇಟು ಮಾರಾಟಗಾರರೂ ಕ್ಯಾಶ್ ಲೆಸ್ ಆಗುತ್ತಿದ್ದಾರೆ, ನಾವೇಕೆ ಆಗಬಾರದು?” ಎಂದು ಆತ ಪ್ರಶ್ನಿಸುತ್ತಾನೆ.

ಹಲವು ಲೈಂಗಿಕ ಕಾರ್ಯಕರ್ತೆಯರಿಗೆ ವಿಟ ಪುರುಷರೇ ಕ್ಯಾಶ್ ಲೆಸ್ ವ್ಯವಹಾರಗಳ ಬಗ್ಗೆ ಪಾಠ ನೀಡಿದ್ದರು. `ನಮ್ಮ ಬಿಸಿನೆಸ್ ಮುಂದುವರಿಸಲು ನಾವು ಇದನ್ನು ಮಾಡಲೇಬೇಕಿದೆ” ಎಂದು ಅವರು ಹೇಳುತ್ತಾರೆ.

ಆದರೂ ಕೆಲ ಲೈಂಗಿಕ ಕಾರ್ಯಕರ್ತೆಯರು ಕ್ಯಾಶ್ ಲೆಸ್ ವ್ಯವಹಾರಗಳಿಂದ ಸಂತುಷ್ಟರಾಗಿಲ್ಲ. ಸಣ್ಣ ಮಕ್ಕಳಿರುವ ಕೆಲವರು ಖರ್ಚುವೆಚ್ಚಗಳನ್ನು ನಿಭಾಯಿಸಲು ಹೆಣಗಾಡುತ್ತಿದ್ದಾರೆ ಹಾಗೂ ತಮ್ಮ ಗ್ರಾಹಕರಿಂದ ನಗದು ನೀಡುವಂತೆಯೂ ಒತ್ತಾಯಿಸುವವರೂ ಇದ್ದಾರೆ.