ಮುಲ್ಕಿ ಬಳಿ ಬಸ್ ಸ್ಫೋಟ : ಹಲವು ಮಂದಿಗೆ ಗಾಯ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿಯ ಕೊಕ್ಕರಕಲ್ ಎಂಬಲ್ಲಿ ಬುಧವಾರ ಬೆಳಿಗ್ಗೆ ಉಡುಪಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಖಾಸಗಿ ವೇಗಧೂತ ಬಸ್ಸಿನಲ್ಲಿ ಇಂಜಿನ್ ಸ್ಫೋಟಗೊಂಡು ಬಸ್ಸಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡಸದೃಶ ಪಾರಾಗಿದ್ದಾರೆ.ಮಂಗಳೂರಿಗೆ ಹೋಗುತ್ತಿದ್ದ ತಡೆರಹಿತ ಬಸ್ ಮುಲ್ಕಿಯಲ್ಲಿ ಪ್ರಯಾಣಿಕರನ್ನು ಹತ್ತಿಸಿ ಮಂಗಳೂರಿನತ್ತ

ಚಲಿಸುತ್ತಿದ್ದ ಸಂದರ್ಭದಲ್ಲಿ ಕೊಕ್ಕರ್ ಕಲ್ ಬಳಿಯ ಪೆಟ್ರೋಲ್ ಪಂಪು ಎದುರುಗಡೆ ಬಸ್ ಇಂಜಿನ್ ಸ್ಫೋಟಗೊಂಡಿದೆ. ಬಸ್ಸಿನ ಇಂಜಿನಿನಲ್ಲಿ ಗಾಳಿ ತುಂಬಿ ಕ್ಯಾಪ್ ತೆರೆದು ಸ್ಫೋಟಗೊಂಡ ಪರಿಣಾಮ ಬಸ್ಸಿನ ಎದುರುಗಡೆಯ ಗ್ಲಾಸ್ ಸಂಪೂರ್ಣ ಹುಡಿಯಾಗಿ ಬಸ್ಸಿನ ಚಾಲಕ ಹಾಗೂ ಬಸ್ಸಿನ ಎದುರು ಭಾಗದಲ್ಲಿ ಬಸ್ಸಿನ ಅರ್ಧದವರೆಗೆ ಕುಳಿತ ಪ್ರಯಾಣಿಕರಿಗೆ ಗಾಜಿನ ಚೂರು ಹಾರಿ ಸುಮಾರು 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಕೈ, ಕಾಲು, ತಲೆ ಮತ್ತಿತರ ಕಡೆಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಬಳಿಕ ಪ್ರಯಾಣಿಕರನ್ನು ಬೇರೆ ಬಸ್ಸಿನಲ್ಲಿ ಕಳುಹಿಸುವ ವ್ಯವಸ್ಥೆ ಮಾಡಲಾಯಿತು.