ಕಾರಿಗೆ ಪಿಕಪ್ ಗುದ್ದಿ ಹಲವರು ಆಸ್ಪತ್ರೆಗೆ

ಅಪಘಾತದಲ್ಲಿ ನುಜ್ಜುಗುಜ್ಜಾದ ಕಾರು

ಅಪಘಾತ ವಲಯವಾಗುತ್ತಿದೆ ಬಡಾ ಎರ್ಮಾಳು ಡೈವರ್ಶನ್

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಎರ್ಮಾಳು ಬುಧಗಿ ಪೆಟ್ರೋಲ್ ಬಂಕ್ ಬಳಿಯ ಡೈವರ್ಶನಿನಲ್ಲಿ ನಡೆದ ಕಾರು ಪಿಕಪ್ ಮುಖಾಮುಖಿ ಡಿಕ್ಕಿಯಲ್ಲಿ ಎರಡು ವಾಹನಗಳಲ್ಲಿದ್ದ ಹಲವರು ಗಾಯಗೊಂಡ ಘಟನೆ ಭಾನುವಾರ ಸಂಜೆ ಸಂಭವಿಸಿದೆ.

ಕಾರೊಂದು ಬುಧಗಿ ಪೆಟ್ರೋಲ್ ಬಂಕಿನಲ್ಲಿ ಇಂಧನ ತುಂಬಿಸಿ ಏಕಮುಖ ಸಂಚಾರವಿರುವ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಮುನ್ನುಗ್ಗಿ ಹೋದಾಗ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಪಿಕಪ್ ವಾಹನಕ್ಕೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಕಾರಿನ ಮುಂಭಾಗ ತೀವ್ರ ಜಖಂಗೊಂಡಿದೆ.

ಎರ್ಮಾಳು ಪೆಟ್ರೋಲ್ ಬಂಕ್ ಬಳಿಯ ಈ ಹೆದ್ದಾರಿ ಡೈವರ್ಶನ್ ದಿನದಿಂದ ದಿನಕ್ಕೆ ಅಪಾಯಕಾರಿಯಾಗಿ ರೂಪುಗೊಳ್ಳುತ್ತಿದೆ. ಅದೇಷ್ಟೋ ಅಪಘಾತಗಳಿಗೆ ಮೂಖ ಸಾಕ್ಷೀಯಾದ ಈ ಡೈವರ್ಶನ್ ಬಳಿ ಶನಿವಾರ ಸ್ಕೂಟರ್ ಒಂದಕ್ಕೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ ಉಚ್ಚಿಲ ನಿವಾಸಿಯೊಬ್ಬರು ಮೃತಪಟ್ಟಿದ್ದು, ಆ ದೃಶ್ಯ ಜನರ ಕಣ್ಣಿಂದ ಮಾಸುವ ಮೊದಲೇ ಮತ್ತೊಂದು ಅಪಘಾತ ಸಂಭವಿಸಿ ಜನರಲ್ಲಿ ಆತಂಕ ಸೃಷ್ಠಿಸಿದೆ.

ವಿರುದ್ಧ ಸಂಚಾರ ಕಾರಣ

ಇಲ್ಲಿ ನಡೆಯುವ ಬಹುತೇಕ ಅಪಘಾತಗಳು ಏಕಮುಖ ಸಂಚಾರವಿರುವ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಸಾಗುವುದೇ ಕಾರಣ ಆಗಿದೆ. ಉಚ್ಚಿಲದಿಂದ ಪಣಿಯೂರು ರಸ್ತೆಗೆ ಸಂಚರಿಸುವ ವಾಹನಗಳು ಸುಲಭದ ಹಾಗೂ ಹತ್ತಿರದ ದಾರಿ ಎಂಬುದಾಗಿ ವಿರುದ್ಧ ದಿಕ್ಕಿನಿಂದ ನಿರಂತರವಾಗಿ ಸಂಚರಿಸುತ್ತಿದ್ದು, ಈ ಬಗ್ಗೆ ವಿರುದ್ಧ ದಿಕ್ಕಿನಿಂದ ಸಂಚರಿಸದಂತೆ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಸಾರ್ವಜನಿಕರೇ ವಿರೋಧ ವ್ಯಕ್ತ ಪಡಿಸಿದ್ದನ್ನು ಘಟನಾ ಸ್ಥಳದಲ್ಲಿದ್ದ ಪೊಲೀಸರು ನೆನಪಿಸಿದ್ದಾರೆ.

ಸರ್ವಿಸ್ ರಸ್ತೆಯೇ ಪರಿಹಾರ

ಈ ಸಮಸ್ಯೆ ಅಂತ್ಯ ಕಾಣಬೇಕಾಗಿದ್ದರೆ ಈ ಭಾಗದಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಅನಿವಾರ್ಯ ಎಂಬುದು ಪ್ರಜ್ಞಾವಂತರ ಮಾತು. ಸರ್ವಿಸ್ ರಸ್ತೆ ನಿರ್ಮಿಸುವಂತೆ ಉಚ್ಚಿಲದ `ನಮ್ಮೂರು ನಮ್ಮ ಜನ’ ಸಂಸ್ಥೆಯ ಪ್ರಮುಖರು ಜನಪ್ರತಿನಿಧಿಗಳು ಸಹಿತ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದರೂ ಈವರೆಗೂ ಯಾವುದೇ ರೀತಿಯಲ್ಲಿ ಸರ್ವಿಸ್ ರಸ್ತೆ ನಿರ್ಮಿಸುವ ಬಗ್ಗೆ ಪ್ರಸ್ತಾವನೆ ಬಂದಿಲ್ಲ. ಜನಪ್ರತಿನಿಧಿಗಳು ಸಹಿತ ಸರ್ಕಾರಿ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಅದೇಷ್ಟೋ ಅಮಾಯಕರು ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂಬುದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.