ರಾಜೇಶ್ವರಿ ಶೆಟ್ಟಿಗೆ ಜಾಮೀನು ನಿರಾಕರಿಸಿದ ಸೆಷನ್ಸ್ ಕೋರ್ಟು

ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ

ನಮ್ಮ ಪ್ರತಿನಿಧಿ ವರದಿ

ಉಡುಪಿ : ನಗರದ ಸಿಟಿ ಬಸ್ ನಿಲ್ದಾಣ ಬಳಿಯ ದುರ್ಗಾಇಂಟರ್ ನ್ಯಾಶನಲ್ ಹೋಟೆಲ್ ಮಾಲಿಕ ಮಣಿಪಾಲ ಸಮೀಪದ ಇಂದ್ರಾಳಿ ಹಯಗ್ರೀವ ನಗರ ನಿವಾಸಿ ಭಾಸ್ಕರ ಶೆಟ್ಟಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿ ಹೆಂಡತಿ ರಾಜೇಶ್ವರಿ ಶೆಟ್ಟಿಯ ಜಾಮೀನು ಅರ್ಜಿಯನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ತಿರಸ್ಕರಿಸಿದೆ.

ಭಾಸ್ಕರ ಶೆಟ್ಟಿ ಪ್ರಕರಣಕ್ಕೆ ಸಂಬಂಧಿಸಿ ಸರಕಾರದಿಂದ ನಿಯೋಜಿತ ವಿಶೇಷ ಸರಕಾರಿ ವಕೀಲ ಉಡುಪಿಯ ಶಾಂತರಾಮ್ ಶೆಟ್ಟಿ ಕೋರ್ಟಿನಲ್ಲಿ ವಾದ ಮಂಡಿಸುತ್ತಾ, “ಇದೊಂದು ಘೋರ ಅಪರಾಧವಾಗಿದೆ. ಅತಿರೇಕದ ಪ್ರೇರಣೆ ಇಲ್ಲವೇ ಯಾವುದೇ ಸಕಾರಣ ಇಲ್ಲದೇ ಕೊಲೆ ಮಾಡಿದ ಕೃತ್ಯವಾಗಿದೆ. ಈ ಕೃತ್ಯವು ಕುಟುಂಬ ಮತ್ತು ಸಮಾಜದ ಸ್ವಾಸ್ಥ್ಯಕ್ಕೆ ತೀವ್ರ ವಿರೋಧವಾಗಿದೆ. ಆರೋಪಿಗಳು ಮಾಡಿದ ಕೊಲೆ ಕೃತ್ಯಕ್ಕೆ ಸಾಕಷ್ಟು ಸಾಂದರ್ಭಿಕ ಸಾಕ್ಷ್ಯಗಳು ದೊರೆತಿವೆ. ಅದರಲ್ಲೂ ಗಂಡನನ್ನು ಹೆಂಡತಿಯೊಬ್ಬಳು ಯಾವುದೇ ಸಕಾರಣ ಇಲ್ಲದೇ ಆಕೆಯು ಮಗ ಹಾಗೂ ಇತರ ಮೂವರನ್ನು ಬಳಸಿಕೊಂಡು ಪೂರ್ವನಿಯೋಜಿತವಾಗಿ ನಡೆಸಿದ ಕೃತ್ಯವಾಗಿದೆ. ಗಂಡನನ್ನು ಕೊಲೆಗೈದು ಹೋಮ ಕುಂಡದಲ್ಲಿ ಸುಟ್ಟು, ಅಲ್ಲೇ ಆರೋಪಿ ಹೆಂಡತಿ ಭಾಗಿಯಾಗಿರುವುದು ಹಿಂದೂ ಸಂಪ್ರಾಯದಕ್ಕೆ ವಿರೋಧವಾಗಿದೆ. ಹಾಗಾಗಿ ಭಾಸ್ಕರ ಶೆಟ್ಟಿ ಕೊಲೆಯ ಮೊದಲ ಆರೋಪಿ ಹೆಂಡತಿ ರಾಜೇಶ್ವÀರಿ ಶೆಟ್ಟಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು” ಎಂದು ವಾದ ಮಾಡಿದ್ದಾರೆ. ಶೆಟ್ಟಿಯವರ ವಾದವನ್ನು ಪುರಸ್ಕರಿಸಿದ ನ್ಯಾಯಾಧೀಶರು ರಾಜೇಶ್ವರಿ ಶೆಟ್ಟಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಆದೇಶ ಹೊರಡಿಸಿದ್ದಾರೆ.

ಉದ್ಯಮಿ ಭಾಸ್ಕರ ಶೆಟ್ಟಿಯನ್ನು 2016, ಜುಲೈ 28ರಂದು ಆರೋಪಿಗಳಾದ ಹೆಂಡತಿ ರಾಜೇಶ್ವರಿ ಶೆಟ್ಟಿ, ಮಗ ನವನೀತ್ ಶೆಟ್ಟಿ, ಜ್ಯೋತಿಷಿ ಕಾರ್ಕಳ ತಾಲೂಕು ನಂದಳಿಕೆ ಗ್ರಾಮದ ನಿರಂಜನ ಭಟ್ಟ, ಆತನ ತಂದೆ ಶೀನು ಯಾನೆ ಶ್ರೀನಿವಾಸ ಭಟ್ಟ ಹಾಗೂ ಕಾರು ಚಾಲಕ ಕೊಂಬು ರಾಘು ಯಾನೆ ರಾಘವೇಂದ್ರ ಮೊಯ್ಲಿ ಸೇರಿಕೊಂಡು ಕೊಲೆ ಮಾಡಿ, ನಿರಂಜನ ಭಟ್ಟನ ಮನೆಯಲ್ಲಿ ಹೋಮ ಕುಂಡದಲ್ಲಿ ಸುಟ್ಟು ಹಾಕಿದ್ದಾರೆ ಎಂದು ಪ್ರಾಸಿಕ್ಯೂಶನ್ ಹೇಳಿಕೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಗಳಾದ ರಾಜೇಶ್ವರಿ, ನವನೀತ್ ಹಾಗೂ ನಿರಂಜನ ಭಟ್ಟ ಮಂಗಳೂರು ಜೈಲಿನಲ್ಲಿ ಬಂಧಿಗಳಾಗಿದ್ದರೆ, ಸಾಕ್ಷ್ಯ ನಾಶ ಮಾಡಿದ್ದ ಆರೋಪಿಗಳಾದ ರಾಘವೇಂದ್ರ ಮತ್ತು ಶ್ರೀನಿವಾಸ ಭಟ್ಟ ಜಾಮೀನಿನಲ್ಲಿ ಹೊರಬಂದಿದ್ದಾರೆ.