ಶಿರಾಡಿ ಅಮ್ಮಾಜೆ ಕಳಪ್ಪಾರು ದೇವಳ ಸರಣಿ ಕಳ್ಳತನ

ಉಪ್ಪಿನಂಗಡಿ : ಚರ್ಚ್ ಕಳ್ಳತನ, ದರೋಡೆಗೆ ಸತತ ಸುದ್ದಿಯಾಗಿರುತ್ತಿರುವ ಉಪ್ಪಿನಂಗಡಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೆ ಕಳ್ಳತನದ ಕೃತ್ಯ ನಡೆದಿದ್ದು, ಈ ಬಾರಿ ಶಿರಾಡಿ ಗ್ರಾಮದ ಅಮ್ಮಾಜೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ಕಳಪ್ಪಾರು ಶ್ರೀಸುಬ್ರಹ್ಮಣ್ಯ ದೇವಳಗಳಿಗೆ ನುಗ್ಗಿದ ಕಳ್ಳರು ದೇವಳದಲ್ಲಿದ್ದ ಚಿನ್ನ, ಬೆಳ್ಳಿ, ನಗದು ಸೇರಿದಂತೆ ಸೊತ್ತುಗಳನ್ನು ಕಳ್ಳತನ ಮಾಡಿದ್ದಾರೆ.

ಮಂಗಳವಾರ ರಾತ್ರಿ ದುರ್ಗಾಪೂಜೆ ಯೂನಡೆದಿದ್ದ ಅಮ್ಮಾಜೆ ಶ್ರೀ ದುರ್ಗಾಪರಮೇಶ್ವರಿ ದೇವಳದ ಭಕ್ತಾದಿಗಳು ಮತ್ತು ವ್ಯವಸ್ಥಾಪನಾ ಸಮಿತಿ ಮಂದಿ ರಾತ್ರಿ 11 ಗಂಟೆಯವರೆಗೆ ದೇವಸ್ಥಾನದಲ್ಲಿದ್ದರೆನ್ನಲಾಗಿದೆ. ಬಳಿಕದ ಸಮಯದಲ್ಲಿ ಕಳ್ಳರು ಎದುರಿನ ಬಾಗಿಲು ಚಿಲಕವನ್ನು ಮುರಿದು ಒಳಗೆ ಪ್ರವೇಶಿಸಿದ್ದಾರೆ. ಅಮ್ಮಾಜೆ ದೇವಳದಲ್ಲಿ ಸುಮಾರು 20 ಗ್ರಾಂ ಶ್ರೀ ದೇವರ ಚಿನ್ನದ ಮಾಲೆ, ದೇವರ ಬೆಳ್ಳಿಯ ಪ್ರಭಾವಳಿ, ಕಾಣಿಕೆ ಡಬ್ಬಿಯಲ್ಲಿದ್ದ ಅಂದಾಜು 35 ಸಾವಿರಕ್ಕೂ ಮೇಲ್ಪಟ್ಟು ನಗದು ದೋಚಿದ್ದಾರೆ.

ದೇವರ ಬೆಳ್ಳಿಯ ಮುಖವಾಡವನ್ನು ಮಾತ್ರ ಕದ್ದೊಯ್ಯದೆ ಉಳಿಸಿದ್ದು, ಇತರ ಸೊತ್ತುಗಳನ್ನು  ಕದ್ದೊಯ್ದಿದ್ದಾರೆ. ಬೆಳಗ್ಗೆ ಎಂದಿನಂತೆ ಪೂಜೆಗೆಂದು ದೇವಳಕ್ಕೆ ಬಂದ ಅರ್ಚಕರಿಗೆ ಬಾಗಿಲಿನ ಚಿಲಕ ಮುರಿದಿರುವುದು ಅರಿವಾಗಿ ಒಳಗೆ ನೋಡಿದಾಗ ಕಳ್ಳತನವಾಗಿರುವುದು ತಿಳಿದುಬಂದಿದೆ.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಂಜುನಾಥ ಗೌಡ ಶಿರಾಡಿ ಉಪ್ಪಿನಂಗಡಿ ಪೋಲೀಸರಿಗೆ ದೂರು ನೀಡಿದ್ದು ಪೋಲೀಸರು ತನಿಖೆ ನಡೆಸುತ್ತಿದ್ದಾರೆ.

ವಾರ್ಷಿಕ ಜಾತ್ರಾ ಮಹೋತ್ಸವದ ಸಂಭ್ರಮದಲ್ಲಿರುವ ಕಳಪ್ಪಾರು ದೇವಳವೂ ಕಳ್ಳರ ಕೃತ್ಯಕ್ಕೆ ಒಳಗಾಗಿದ್ದು, ಮಂಗಳವಾರದಂದೇ ದ್ವಜಾರೋಹಣದ ಕಾರ್ಯಕ್ಕೆ ಒಳಗಾಗಿದ್ದ ದೇವಳದಲ್ಲಿ ಅದೇ ದಿನ ರಾತ್ರಿ ಕಳ್ಳರ ಪ್ರವೇಶಕ್ಕೆ ತುತ್ತಾಗಿದೆ.  ರಾತ್ರೆ ವೇಳೆ ಅಮ್ಮಾಜೆಯಲ್ಲಿ ಕಳ್ಳತನ ನಡೆಸಿದ ಕಳ್ಳರೇ ಇಲ್ಲಿಯೂ ಕಳ್ಳತನ ನಡೆಸಿದ ದಟ್ಟ ಸಾಧ್ಯತೆಗಳಿದ್ದು ಈ ದೇವಳದಿಂದಲೂ ದೇವರ ಕಾಣಿಕೆ ಡಬ್ಬಿ ಒಡೆದು ಅಂದಾಜು ರೂ 5 ಸಾವಿರಕ್ಕೂ ಮೇಲ್ಪಟ್ಟು ನಗದು ದೋಚಿರುತ್ತಾರೆ ಎಂದು ದೇವಳದ ಅಧ್ಯಕ್ಷ ಡೊಂಬಯ ಗೌಡ, ಉಪಾಧ್ಯಕ್ಷ ನಾರಾಯಣ ಗೌಡ ಶಿರಾಡಿ, ಧನಂಜಯ ಗೌಡರವರು ಪೋಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿರುತ್ತಾರೆ.

ದೇವಳದ ಕಾಣಿಕೆ ಡಬ್ಬಿಗಳನ್ನು ಒಂದಷ್ಟು ದೂರ ಕಳ್ಳರು ಹೊತ್ತೊಯ್ದು ಕಾಡು ಗಿಡಗಳ ಮಧ್ಯೆ ಡಬ್ಬಿಯನ್ನು ಒಡೆದು ಅದರಲ್ಲಿದ್ದ ನಗದನ್ನು ಎತ್ತಿ ಡಬ್ಬಿಯನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದಾರೆ. ಕಳ್ಳತನದಘಟನೆ ನಡೆದ ಎರಡೂ ದೇವಳಗಳಿಗೆ ಪುತ್ತೂರು ಡಿವೈಎಸ್ಪಿ ಭಾಸ್ಕರ ರೈ, ಉಪ್ಪಿನಂಗಡಿ ವೃತ್ತ ನಿರೀಕ್ಷಕ ಅನಿಲ್ ಎಸ್ ಕುಲಕರ್ಣಿ, ಮತ್ತು ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಪ್ಪಿನಂಗಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.