ಮುಲ್ಕಿಯಲ್ಲಿ ಸರಣಿ ಕಳ್ಳತನ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಇಲ್ಲಿನ ಬಸ್ ನಿಲ್ದಾಣದ ಬಳಿಯ ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆದ ಘಟನೆ ಶನಿವಾರ ತಡರಾತ್ರಿಯಿಂದ ಭಾನುವಾರ ಬೆಳಗ್ಗಿನ ಒಳಗೆ ನಡೆದಿದೆ. ಬಸ್ ನಿಲ್ದಾಣದ ಬಳಿಯ ಸಿಟಿಫ್ಲವರ್ ಸ್ಟಾರ್ ಹೂವಿನ ಅಂಗಡಿಗೆ ನುಗ್ಗಿದ ಕಳ್ಳ ಡ್ರಾವರನ್ನು ಜಾಲಾಡಿ ಏನೂ ಸಿಗದೆ ಅದರ ಬಳಿಯಲ್ಲೇ ಇರುವ ನ್ಯೂ ಅಯ್ಯಂಗಾರ್ ಬೇಕರಿಯ ಒಳಗಡೆ ಫೈಬರ್ ಶೀಟ್ ಹಾಗೂ ಕಬ್ಬಿಣದ ಸರಳಿನ ಮೂಲಕ ಶೆಟರಿನ ಬೀಗ ಒಡೆದು ಒಳಗಡೆ ಜಾಲಾಡಿ ಡ್ರಾವರಿನಲ್ಲಿದ್ದ ಸುಮಾರು 8 ಸಾವಿರ ನಗದನ್ನು ದೋಚಿದ್ದಾನೆ. ಬೇಕರಿಯ ಒಳಭಾಗದಲ್ಲಿ ಕಳ್ಳ ಟಾರ್ಚ್ ಲೈಟ್ ಹಿಡಿದು ಡ್ರಾವರನ್ನು ಎಳೆದು ಕಳ್ಳತನ ಮಾಡುತ್ತಿರುವ ದೃಶ್ಯ ಸೀಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಲ್ಲಿಂದ ಹೆದ್ದಾರಿ ಬದಿಯಲ್ಲಿರುವ ವೆಲ್ ಕಂ ಫ್ಲವರ್ ಸ್ಟಾರ್ ಎಂಬ ಹೂವಿನ ಅಂಗಡಿ ಹಾಗೂ ಅದರ ಪಕ್ಕದಲ್ಲೇ ಇರುವ ಪಾನ್ ಸ್ಟಾಲ್ ಅಂಗಡಿಗೆ ನುಗ್ಗಿ ಸ್ಕ್ರೂಡೈವರಿನಿಂದ ಡ್ರಾವರನ್ನು ಜಾಲಾಡಿ ಸಣ್ಣ ಪುಟ್ಟ ಪುಡಿಗಾಸನ್ನು ಕಳ್ಳತನ ಮಾಡಲಾಗಿದೆ.

ಮುಲ್ಕಿ ಆಸುಪಾಸಿನಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸರ ಉದಾಸೀನತೆಯೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.