ಮುಲ್ಕಿ ಜನರ ಬೆಚ್ಚಿ ಬೀಳಿಸಿದ ಸರಣಿ ಕಳವು

ಕಾರ್ನಾಡ್ ಮನೆಯ ಲಕ್ಷಾಂತರ

ರೂ ನಗ-ನಗದು ಕಳ್ಳರಪಾಲು

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಕಾರ್ನಾಡು ಹರಿಹರ ದೇವಳ ಬಳಿ ಇರುವ ಹರಿಹರ ನಗರ ನಿವಾಸಿ ಸುಧೀರ್ ಶೆಟ್ಟಿ ಎಂಬವರ ಮನಗೆ ರಾತ್ರಿ ಕಳ್ಳರು ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ನಗ-ನಗದು ಕಳವು ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಹರಿಹರ ನಗರದಲ್ಲಿ ಸೋಮವಾರ ಮಧ್ಯರಾತ್ರಿ ಸುಮಾರು ನಾಲ್ಕು ಮನೆಗೆ ಸರಣಿ ಕಳ್ಳತನಕ್ಕೆ ಯತ್ನಿಸಿದ್ದು ಅದರಲ್ಲಿ ಸುಧೀರ್ Éಟ್ಟಿ ಎಂಬವರ ಮನೆಯಿಂದ ಸುಮಾರು ನಾಲ್ಕು ಲಕ್ಷ ರೂಪಾಯಿ ಮೌಲ್ಯದ ನಗ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಸುಧೀರ್ ಶೆಟ್ಟಿ ಮನೆಗೆ ಆಗಮಿಸಿದ ಕಳ್ಳರು ಎದುರಿನ ಬಾಗಿಲಿನ ಬದಿಯಲ್ಲಿರುವ ಕಿಟಿಕಿಯಿಂದ ಬಾಗಿಲಿನ ಒಳಬದಿಯಲ್ಲಿ ಮನೆಯವರು ಲಾಕ್ ಅಳವಡಿಸಿ ಹಾಗೆಯೇ ಬಿಟ್ಟಿದ್ದ ಕೀ ಗೊಂಚಲನ್ನು ಯಾವುದೋ ಸಾಧನದಿಂದ ತೆಗೆದಿದ್ದಾರೆ. ಬಳಿಕ ಎದುರಿನ ಬಾಗಿಲನ್ನು ಕೀ ಗೊಂಚಲಿನಿಂದ ತೆರೆದು ಸೀದಾ ಬೆಡ್ ರೂಮಿಗೆ ಪ್ರವೇಶಿಸಿದ್ದಾರೆ. ಅಲ್ಲಿ ಸುಧೀರ್ ಶೆಟ್ಟಿ ಪತ್ನಿ ಮತ್ತು ಮಗಳು ಮಲಗಿದ್ದರು. ಅವರನ್ನು ಪ್ರಜ್ಞೆ ತಪ್ಪಿಸಿ ಕಪಾಟಿನ ಡ್ರಾವರನ್ನು ಜಾಲಾಡಿ ಸುಮಾರು 60 ಸಾವಿರ ನಗದು ಹಾಗೂ ಬೆಲೆ ಬಾಳುವ ಸರ, ನೆಕ್ಲೆಸ್, ರಿಂಗ್ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಕಳವು ಸಂದರ್ಭ ಸುಧೀರ್ ಶೆಟ್ಟಿ ಮತ್ತಿತರರು ಮತ್ತೊಂದು ಕೋಣೆಯಲ್ಲಿ ಮಲಗಿದ್ದರಿಂದ ಅವರಿಗೆ ಕಳವು ನಡೆದದ್ದು ಗೊತ್ತಾಗಲಿಲ್ಲ. ಎಂದಿನಂತೆ ಸುಧೀರ್ ಶೆಟ್ಟಿ ಬೆಳಗ್ಗೆ ಸುಮಾರು 5 ಗಂಟೆಗೆ ಎದ್ದು ಹೊರಗಡೆ ನೋಡುವಾಗ ಎದುರಿನ ಬಾಗಿಲು ತೆರೆದಿದ್ದುದನ್ನು ಕಂಡು ಗಾಬರಿಯಾಗಿ ಕೂಡಲೇ ಪತ್ನಿ ಮಕ್ಕಳ ಕೋಣೆಗೆ ಹೋಗಿ ಪರಿಶೀಲಿಸಿದಾಗ ಕಳವು ನಡೆದದ್ದು ಗಮನಕ್ಕೆ ಬಂದಿದೆ.

ಸುಧೀರ್ ಶೆಟ್ಟಿ ಮನೆಯವರು ಮಲಗುವಾಗ ರಾತ್ರಿ 12.30 ಆಗಿದೆ. ಬಳಿಕವೇ ಸುಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಸುಧೀರ್ ಶೆಟ್ಟಿ ಮಗಳು ಕಾಲೇಜಿಗೆ ಹೋಗುತ್ತಿದ್ದು ಬೆಳಿಗ್ಗೆ ಬೇಗ ಏಳಲೆಂದು 3.30 ಗಂಟೆಗೆ ಪ್ರತೀದಿನ ಅಲರಾಮ್ ಇಟ್ಟಿದ್ದರು. ಆದರೆ 3.30 ಗಂಟೆ ಎಚ್ಚರವಾಗದಿದ್ದುದನ್ನು ನೋಡಿದರೆ ಕಳ್ಳರು ಎಚ್ಚರ ತಪ್ಪಿಸಿ ಕಳ್ಳತನ ಮಾಡಿದ್ದಾರೆ ಎಂದು ಸುಧೀರ್ ಶೆಟ್ಟಿ ಹೇಳಿದ್ದಾರೆ.

ಕಳ್ಳರು ವ್ಯವಸ್ಥಿತ ರೀತಿಯಲ್ಲೇ ಕಳ್ಳತನ ಮಾಡಲು ಬಂದಿದ್ದು, ಹರಿಹರ ನಗರದ ದಾರಿದೀಪಗಳನ್ನು ಕೂಡ ಸ್ವಿಚ್ ಆಫ್ ಮಾಡಿದ್ದಾರೆ. ಬಳಿಕ ಕಳ್ಳರು ನೆರೆಮನೆಯ ನಿವಾಸಿ ಯೋಗೀಶ್ ಕೋಟ್ಯಾನ್ ಎಂಬವರ ಮನೆಗೂ ಹೋಗಿದ್ದು, ಅವರ ಮಾಳಿಗೆಯ ಕೋಣೆಯಿಂದ ಇದೇ ರೀತಿ ಒಳಗಿನ ಬದಿಯಿಂದ ಬೀಗದ ಕೈಯನ್ನು ತೆಗೆದು ಕೆಳಗಿನ ಕೋಣೆಗೆ ಬಂದು ಪೂರಾ ಜಾಲಾಡಿದ್ದಾರೆ. ಯೋಗೀಶ್ ಕೋಟ್ಯಾನ್ ಮಲಗಿದ್ದ ಕೋಣೆಯಲ್ಲಿ ಕಪಾಟು ಇದ್ದು ಅದನ್ನು ಮುಟ್ಟದೆ ಹಾಗೆಯೇ ಏನೂ ಸಿಗದೆ ಹೋಗಿದ್ದಾರೆ. ಅಲ್ಲಿಂದ ಮೋಹನ್ ಕೋಟ್ಯಾನ್ ಎಂಬವರ ಮನೆಯ ಗೇಟು ತೆರೆಯುವಾಗ ನಾಯಿಗಳ ಬೊಬ್ಬೆ ಶಬ್ದ ಬಂದು ಸ್ಥಳದಿಂದ ಪರಾರಿಯಾಗಿದ್ದಾರೆ. ಅದೇ ರೀತಿ ಗಣೇಶ್ ಕಾಮತ್ ಎಂಬವರ ಮನೆಯ ಹಿಂದುಗಡೆ ಸುಮಾರು ಅನ್ನದ ರಾಶಿ ಚೆಲ್ಲಿದ್ದು ಅಲ್ಲಿಯೇ ಕುಳಿತು ಊಟ ಮಾಡಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಮಂಗಳೂರು ಪೊಲೀಸ್ ವಿಭಾಗದ ಕ್ರೈಂ ಡಿಸಿಪಿ ಉಮಾ, ಎಸಿಪಿ ರಾಜೇಂದ್ರ, ಮುಲ್ಕಿ ಇನಸ್ಪೆಕ್ಟರ್ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಶ್ವಾನದಳ ಮೂರು ಮನೆಗೆ ಹೋಗಿ ಕಾರ್ನಾಡು ಸಂಪರ್ಕಿಸುವ ಮಸೀದಿ ರಸ್ತೆ ಕಾಲುದಾರಿಯವರೆಗೆ ಹೋಗಿದೆ. ಹರಿಹರ ನಗರದಲ್ಲಿ ಎಲ್ಲಿಯೂ ಸೀಸಿ ಕ್ಯಾಮರಾ ಇಲ್ಲದಿದ್ದುದು ಕಳ್ಳರಿಗೆ ವರದಾನವಾಗಿದೆ.

ತಿಂಗಳ ಹಿಂದೆ ಕೂಡ ಬಳ್ಕುಂಜೆಯಲ್ಲಿ ಇದೇ ರೀತಿ ಕಳವು ಪ್ರಕರಣ ನಡೆದಿದ್ದು, ವ್ಯವಸ್ಥಿತ ರೀತಿಯಲ್ಲಿ ನಡೆದ ಕಳ್ಳತನ ಗಮನಿಸಿದರೆ ವೃತ್ತಿಪರ ಕಳ್ಳರೇ ಈ ಕೃತ್ಯ ನಡೆಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದು ನಾಗರಿಕರು ಆದಷ್ಟು ಜಾಗೃತರಾಗಿರಬೇಕಿದೆ.