ಹಾಸನ ಜಿಲ್ಲಾ ಡೀಸಿ ಚೈತ್ರಾ ವಿರುದ್ಧ ಸರಣಿ ಪ್ರತಿಭಟನೆ

ಹಾಸನ : ನಗರದಲ್ಲಿ ಹಾಸನ ಡೀಸಿ ವಿ ಚೈತ್ರಾ ವಿರುದ್ಧ ಹಾಸನ ಕಾರ್ಯನಿತರ ಪತ್ರಕರ್ತರ ಅಸೋಸಿಯೇಶನ್, ದಲಿತ ಸಂಘಟನೆಗಳ ಮುಖಂಡರು, ಬಿಜೆಪಿ ಸದಸ್ಯರು ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರದಂದು ವಿಭಿನ್ನ ಆರೋಪ ಹೊರಿಸಿ ಸರಣಿ ಪ್ರತಿಭಟನೆ ನಡೆಸಿದರು.

ಪತ್ರಿಕಾಗೋಷ್ಠಿಯೊಂದರಲ್ಲಿ ತನ್ನ ವಿರುದ್ಧ ಕಾಂಗ್ರೆಸ್ ನಾಯಕರೊಬ್ಬರು ಆರೋಪ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿದ ಡೀಸಿ ಚೈತ್ರಾ ಇತ್ತೀಚೆಗೆ ಪತ್ರಿಕೆಗಳಿಗೆ ನೊಟೀಸು ಜಾರಿಗೊಳಿಸಿ, ಜಿಲ್ಲಾ ಮಾಧ್ಯಮ ಸಮಿತಿಯ ಅಧ್ಯಕ್ಷರಾಗಿ ತಾನು ಕ್ರಮ ಜರುಗಿಸಲಿದ್ದೇನೆ ಎಂದು ಎಚ್ಚರಿಸಿದ್ದರು. ಡೀಸಿ ನೊಟೀಸು ವಿರೋಧಿಸಿ ಪತ್ರಕರ್ತರು ನಗರದಲ್ಲಿ ಮೋರ್ಚಾ ಒಯ್ದಿದ್ದರು.

ಬಳಿಕ ನಗರಕ್ಕೆ ಭೇಟಿ ನೀಡಿದ್ದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪರಿಗೆ ಮನವಿಯೊಂದನ್ನು ಸಲ್ಲಿಸಿದ ಅಸೋಸಿಯೇಶನಿನ ಪದಾಧಿಕಾರಿಗಳು, ಡೀಸಿ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.

ದಲಿತರಿಂದ ಪ್ರತಿಭಟನೆ

ಇಲ್ಲಿನ ಬಿ ಆರ್ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘಟನೆಗಳ ನಾಯಕರು ಆಯೋಜಿಸಿದ್ದ ಬಾಬು ಜಗಜೀವನ್ ರಾಮರ ಹುಟ್ಟುಹಬ್ಬ ಕಾರ್ಯಕ್ರಮದ ಆರಂಭದ ವೇಳೆ ಗೈರಾದ ಡೀಸಿ ವಿರುದ್ಧ ದಲಿತ ಮುಖಂಡರು ಘೋಷಣೆಗಳನ್ನು ಕೂಗಿದರು.

ಆದರೆ ಅವರು ಕಂದಾಯ ಸಚಿವ ಕಾಗೋಡು ತಿಮ್ಮಪ್ಪರ ಜೊತೆಯಲ್ಲಿ ಒಂದು ತಾಸು ವಿಳಂಬವಾಗಿ ಸಭೆಗೆ ಹಾಜರಾಗಿದ್ದರು. ಆ ವೇಳೆಯೂ ದಲಿತ ನಾಯಕರು ಡೀಸಿ ದಲಿತ ವಿರೋಧಿ ಎಂದು ಟೀಕಿಸಿದ್ದಾರೆ.

ಬಿಜೆಪಿ ಪ್ರತಿಭಟನೆ

ಜಿಲ್ಲೆಯ ಜನರ ಸಮಸ್ಯೆಗಳಿಗೆ ಡೀಸಿ ಚೈತ್ರಾ ಸ್ಪಂದಿಸುವುದಿಲ್ಲ ಎಂದು ಆರೋಪಿಸಿದ ಬಿಜೆಪಿ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಹಾಸನ ನಗರ ಘಟಕದ ಸದಸ್ಯರು ಪ್ರತಿಭಟನೆ ನಡೆಸಿದರು.