ಸರಣಿ ಅಪಘಾತ : ಮೂವರು ಗಂಭೀರ

ಪಲ್ಟಿಯಾದ ಕಂಟೈನರ್

ಕೋಲ್ನಾಡು ಬಳಿ ಲಾರಿ, ಕಂಟೈನರ್ ಹಾಗೂ ಟಾಟಾ ಸುಮೋ ಅಪಘಾತ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಕೋಲ್ನಾಡು ಬಳಿ ಲಾರಿ ಮತ್ತು ಕಂಟೈನರ್ ಹಾಗೂ ಟಾಟಾ ಸುಮೋ ನಡುವಿನ ಅಪಘಾತದಲ್ಲಿ ಮೂವರು ಗಂಭೀರ ಗಾಯಗೊಂಡು ಮುಕ್ಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನು ಕಂಟೈನರ್ ಚಾಲಕ ತಮಿಳುನಾಡು ನಿವಾಸಿ ವೆಂಕಟೇಶ್ (52) ಎಂದು ಗುರುತಿಸಲಾಗಿದೆ. ಅಪಘಾತದಿಂದ ಹೆದ್ದಾರಿ ಸಂಚಾರ ವ್ಯತ್ಯಯಗೊಂಡಿದ್ದು, ಸುರತ್ಕಲ್ ಟ್ರಾಫಿಕ್ ಪೊಲೀಸರು, ಅಗ್ನಿಶಾಮಕ ದಳ ಹಾಗೂ 108 ಅಂಬುಲೆನ್ಸ್ ಸ್ಥಳಕ್ಕೆ ಧಾವಿಸಿದೆ.

ಮಂಗಳೂರಿನಿಂದ ಪಡುಬಿದ್ರೆ ಕಂಪನಿಯ ಸಾಮಾನುಗಳನ್ನು ಕೊಂಡುಹೋಗುತ್ತಿದ್ದ ಕಂಟೈನರ್ ಪುಣೆಯಿಂದ ಮಂಗಳೂರು ಕಡೆಗೆ ನೀರುಳ್ಳಿ ಹೇರಿಕೊಂಡು ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣ ತಪ್ಪಿ ಸುಮಾರು 10 ಅಡಿ ಆಳದ ಗುಂಡಿಗೆ ಬಿದ್ದಿದೆ. ಅಪಘಾತದ ಸಂದರ್ಭ ಲಾರಿಯ ಚಾಲಕ ಬ್ರೇಕ್ ಹಾಕಿದಾಗ ಹಿಂದೆ ಇದ್ದ ಟಾಟಾ ಸುಮೋ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಜಖಂಗೊಂಡಿದೆ. ಅಪಘಾತದ ರಭಸಕ್ಕೆ ಲಾರಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಡಿವೈಡರ್ ಮೇಲೇರಿದೆ. ಲಾರಿಯಲ್ಲಿದ್ದ ಚಾಲಕ ಸಹಿತ ಇಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದಿಂದ ಟಾಟಾ ಸುಮೋ ವಾಹನಕ್ಕೂ ಹಾನಿಯಾಗಿದ್ದು ಚಾಲಕ ಅಪಾಯದಿಂದ ಪಾರಾಗಿದ್ದಾನೆ.

ಪೊದೆಯಲ್ಲಿ ಅಡಗಿದ್ದ ಕಂಟೈನರ್ ಚಾಲಕ

ಅಪಘಾತ ನಡೆದು ಕಂಟೈನರ್ 10 ಅಡಿ ಆಳದ ಹೆದ್ದಾರಿ ಬದಿಯ ಗುಂಡಿಗೆ ಬಿದ್ದು ಪಲ್ಟಿಯಾಗುತ್ತಿದ್ದಂತೆ ಚಾಲಕ ಕಾಣೆಯಾಗಿದ್ದ. ಅಪಘಾತದ ಬಳಿ ಸೇರಿದ್ದ ಸ್ಥಳೀಯರು ಚಾಲಕನ ಹುಡುಕಲು ಪ್ರಾರಂಭಿಸಿದರು. ಕೆಲವರು ಕಂಟೈನರ ಅಡಿಗೆ ಸಿಲುಕಿದ್ದಾನೆ ಎಂದು ಭಾವಿಸಿದ್ದರು. ಆದರೆ ಕೆಲವರು ಹುಡುಕಾಟ ಪ್ರಾರಂಭಿಸಿದಾಗ ರಸ್ತೆ ಬದಿಯ ವಾಹನವೊಂದರ ಶೋರೂಮಿನ ಬಳಿಯ ಪೊದೆಯಲ್ಲಿ ಪತ್ತೆಯಾಗಿದ್ದಾನೆ. ತಲೆ ಹಾಗೂ ಮುಖಕ್ಕೆ ಗಂಭೀರ ಗಾಯಗೊಂದಿಗೆ ಪೊದೆಯಲ್ಲಿ ಅಡಗಿ ಕುಳಿತಿದ್ದ ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆತನನ್ನು ತಮಿಳುನಾಡು ನಿವಾಸಿ ವೆಂಕಟೇಶ್ (52) ಎಂದು ಗುರುತಿಸಲಾಗಿದೆ. ಕಂಟೈನರ್ ಪಲ್ಟಿಯಾದ ಸ್ಥಳದಲ್ಲಿ ಸ್ಥಳೀಯ ನಿವಾಸಿ ದಿನೇಶ್ ಕೋಲ್ನಾಡು ಎಂಬವರ ಮನೆ ಹಾಗೂ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ವಾಹನ ಕೂದಲೆಳೆಯಿಂದ ಪಾರಾಗಿದೆ. ಮನೆಯಲ್ಲಿ ದಿನೇಶರ ಅಮ್ಮ ಇದ್ದು ದಿನೇಶ್ ಹೊರಗಡೆ ಹೋಗಿದ್ದರು. ಮನೆಯ ಎದುರುಗಡೆ ಸುಮಾರು 10 ಗಂಟೆಗೆ ಭೀಕರ ಸದ್ದು ಕೇಳಿ ಗಾಬರಿಯಿಂದ ಹೊರಬಂದು ನೋಡಿದಾಗ ಕಂಟೈನರ್ ಪಲ್ಟಿಯಾಗಿದ್ದುದು ಕಂಡುಬಂದಿದೆ.

ಹೆದ್ದಾರಿ ಸಂಚಾರ ಅಸ್ತವ್ಯಸ್ತ

ಅಪಘಾತದಿಂದ ಹೆದ್ದಾರಿ ಸಂಚಾರ ಸುಮಾರು ಎರಡು ಗಂಟೆಗಳ ಕಾಲ ಅಸ್ತವ್ಯಸ್ತಗೊಂಡಿದೆ. ಸುರತ್ಕಲ್ ಸಂಚಾರಿ ಪೊಲೀಸ್ ಇನಸ್ಪೆಕ್ಟರ್ ಮಂಜುನಾಥ್ ಸ್ಥಳೀಯ ಸಮಾಜಸೇವಕರಾದ ತೇಜಪಾಲ ಹಳೆಯಂಗಡಿ, ಹರಿಪ್ರಸಾದ ಪಡುಪಣಂಬೂರು, ಮುಲ್ಕಿ ನ ಪಂ ಸದಸ್ಯ ಪುತ್ತುಬಾವರೊಂದಿಗೆ ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸಪಡುತ್ತಿದ್ದಾಗಲೇ ಮುಂಬಯಿಗೆ ಹೊರಟಿದ್ದ ಗಣೇಶ್ ಬಸ್ಸಿನ ಚಾಲಕ ರಸ್ತೆ ತಡೆ ತೆರವುಗೊಳಿಸಲು ಪ್ರಯತ್ನಿಸುತ್ತಿದ್ದ ತೇಜಪಾಲ ಜೊತೆ ಉಢಾಫೆಯಿಂದ ವರ್ತಿಸಿ ಅವಾಚ್ಯವಾಗಿ ನಿಂದಿಸಿ ಆತುರದಿಂದ ಬಸ್ಸನ್ನು ನುಗ್ಗಿಸಲು ಪ್ರಯತ್ನಿಸಿದಾಗ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಉದ್ವಿಗ್ನಗೊಂಡಿತು. ಕೂಡಲೇ ಪೊಲೀಸರು ಧಾವಿಸಿ ಗಣೇಶ್ ಬಸ್ಸಿನ ಚಾಲಕಗೆ ಎಚ್ಚರಿಕೆ ನೀಡಿದರು.

ಮುಲ್ಕಿಗೆ ಸರಬರಾಜಾಗುತ್ತಿರುವ ತುಂಬೆ ನೀರಿನ ಪೈಪು ಸೋರಿಕೆಯ ಹಿನ್ನೆಲೆಯಲ್ಲಿ ಪಡುಪಣಂಬೂರು ಕಿರುಸೇತುವೆ ಬಳಿ ಹೆದ್ದಾರಿಯನ್ನು ಅಗೆದು ಹಾಕಿದ್ದರಿಂದ ಪಡುಪಣಂಬೂರಿನಿಂದ ಕೋಲ್ನಾಡಿನವರೆಗೆ ರಾಷ್ಟ್ರೀಯ ಹೆದ್ದಾರಿಯನ್ನು ಎಕಮುಖ ರಸ್ತೆಯನ್ನಾಗಿಸಿ ಪರಿವರ್ತಿಸಲಾಗಿತ್ತು ಹಾಗೂ ರಸ್ತೆ ಅಗೆದು ಹಾಕುವಾಗ ಹೆದ್ದಾರಿ ಇಲಾಖೆ ಯಾವುದೇ ಮುಂಜಾಗರೂಕತೆ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ವರ್ಷದ ಹಿಂದೆ ಇದೇ ರೀತಿ ಕೋಲ್ನಾಡು ಕಿರುಸೇತುವೆ ಬಳಿ ತುಂಬೆ ನೀರಿನ ಪೈಪ್ ಒಡೆದುಹೋಗಿ ಹೆದ್ದಾರಿಯ ಏಕಮುಖ ರಸ್ತೆಯಲ್ಲಿ ಅನೇಕ ಅಪಘಾತಗಳು ನಡೆದಿತ್ತು ಎಂದು ಸ್ಥಳೀಯರು ನೆನಪಿಸಿಕೊಳ್ಳುತ್ತಿದ್ದಾರೆ.