ಬಪ್ಪನಾಡಿನಲ್ಲಿ ಸರಣಿ ಅಪಘಾತ : ಚಾಲಕ ಪವಾಡಸದೃಶ ಪಾರು

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಬಪ್ಪನಾಡು ಬಳಿ ಕಾರು ಬಸ್ ಮತ್ತು ಟ್ಯಾಂಕರ್ ನಡುವೆ ಸರಣಿ ಅಪಘಾತ ನಡೆದಿದ್ದು, ಘಟನೆಯಲ್ಲಿ ಕಾರು ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡಸದೃಶ ಪಾರಾದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ ತಡೆರಹಿತ ಬಸ್ಸೊಂದು ಪ್ರಯಾಣಿಕರನ್ನು ಹತ್ತಿಸಲು ಬಪ್ಪನಾಡು ದೇವಸ್ಥಾನದ ಎದುರು ನಿಲ್ಲಿಸಿದಾಗ ಹಿಂದಿನಿಂದ ಬರುತ್ತಿದ್ದ ಸಾಂಟ್ರೋ ಕಾರು ಚಾಲಕ ನಿಧಾನವಾಗಿ ಬ್ರೇಕ್ ಹಾಕಿದ್ದು, ಆಗ ಅದರ ಹಿಂದಿನಿಂದ ಉಡುಪಿ ಕಡೆಗೆ ಅತೀ ವೇಗದಿಂದ ಬರುತ್ತಿದ್ದ ಟ್ಯಾಂಕರ್ ಚಾಲಕ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ರಭಸಕ್ಕೆ ಚಾಲಕ ನಿಯಂತ್ರಣ ತಪ್ಪಿ ಟ್ಯಾಂಕರ್ ಡಿವೈಡರ್ ಮೇಲೇರಿ ಮಂಗಳೂರು ಕಡೆ ರಸ್ತೆಗೆ ಹೋಗಿ ನಿಂತಿದೆ. ಇತ್ತ ಟ್ಯಾಂಕರ್ ಡಿಕ್ಕಿ ಹೊಡೆದು ಕಾರು ಚಾಲಕನ ನಿಯಂತ್ರಣ ತಪ್ಪಿ ಎದುರಿನಲ್ಲಿದ್ದ ತಡೆರಹಿತ ಬಸ್ಸಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಚಾಲಕ ಅದರೊಳಗೆ ಸಿಕ್ಕಿ ಹಾಕಿ ಒದ್ದಾಡುತ್ತಿದ್ದಾಗ ಸ್ಥಳೀಯರು ಆತನನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಪಘಾತದಲ್ಲಿ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರು ಚಾಲಕ ಕುಂದಾಪುರ ಶಂಕರನಾರಾಯಣ ನಿವಾಸಿ ಸದಾಶಿವ (56) ಅಲ್ಪಸ್ವಲ್ಪ ಗಾಯಗಳೊಂದಿಗೆ ಪವಾಡಸದೃಶ ಪಾರಾಗಿದ್ದಾರೆ.

ಅಪಘಾತವಲಯ ಬಪ್ಪನಾಡು

ರಾಷ್ಟ್ರೀಯ ಹೆದ್ದಾರಿ 66 ಮುಲ್ಕಿ ಬಸ್ ನಿಲ್ದಾಣ, ಬಪ್ಪನಾಡು ದೇವಸ್ಥಾನದ ಬಳಿ ಹಾಗೂ ಮುಲ್ಕಿ ಬಿಲ್ಲವ ಸಂಘದ ಬಳಿಯಲ್ಲಿ ಕಳೆದ ತಿಂಗಳಿನಿಂದ ಹಲವಾರು ಅಪಘಾತಗಳು ನಡೆದಿದ್ದು, ಅನೇಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಲ್ಕಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸರ್ವೀಸ್ ರಸ್ತೆ ಇಲ್ಲದೆ ಪ್ರಯಾಣಿಕರಿಗೆ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಕೂಡಲೇ ಹೆದ್ದಾರಿ ಇಲಾಖೆ ನಿದ್ರೆಯಿಂದ ಎಚ್ಚೆತ್ತು ಕಾಮಗಾರಿ ಪೂರ್ತಿಗೊಳಿಸಬೇಕು ಇಲ್ಲದಿದ್ದರೆ ಹೆದ್ದಾರಿ ಇಲಾಖಾ ಕಚೇರಿ ಎದುರು ಪ್ರತಿಭಟಿಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿಯ ಮಂಜುನಾಥ ಆರ್ ಕೆ ಎಚ್ಚರಿಸಿದ್ದಾರೆ.