ಕೊಡಗು ಎಸ್ಪಿ ಕಾರು ಚಾಲಕ ಆಸ್ಪತ್ರೆಗೆ

ಕುಂದಾಪುರದಲ್ಲಿ ಸರಣಿ ಅಪಘಾತ

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ಸರಣಿ ಅಪಘಾತವೊಂದರಲ್ಲಿ ಕೊಡಗು ಎಸ್ಪಿ ರಾಜೆಂದ್ರ ಪ್ರಸಾದ್ ಪ್ರಯಾಣಿಸುತ್ತಿದ್ದ ವಾಹನ ಚಾಲಕ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಲ್ಲೂರು ಸಮೀಪದ ಜಾಲಾಡಿ ಎಂಬಲ್ಲಿ ನಡೆದಿದೆ.

ಈ ಹಿಂದೆ ಉಡುಪಿ ಎಸ್ಪಿಯಾಗಿದ್ದ ರಾಜೇಂದ್ರ ಪ್ರಸಾದ್ ಪ್ರಸ್ತುತ ಕೊಡಗು ಜಿಲ್ಲಾ ಎಸ್ಪಿಯಾಗಿದ್ದು, ಕುಟುಂಬ ಸಮೇತರಾಗಿ ಮಂಗಳೂರು ಕಡೆಯಿಂದ ಭಟ್ಕಳ ಕಡೆಗೆ ತನ್ನ ಎಕ್ಸ್ ಯೂ ವಿ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ವಾಹನದ ಚಾಲಕನ ಅತೀ ವೇಗದಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಲ್ಲೂರು ಸಮೀಪದ ಜಾಲಾಡಿ ಎಂಬಲ್ಲಿ ಎದುರಿನಿಂದ ಬರುತ್ತಿದ್ದ ತೂಫಾನ್ ವಾಹನಕ್ಕೆ ಡಿಕ್ಕಿ ಹೊಡೆದು ಮುಂದಕ್ಕೆ ಚಲಿಸಿ ಎದುರಿನಿಂದ ಬರುತ್ತಿದ್ದ ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತದಲ್ಲಿ ಎಸ್ಪಿ ವಾಹನದ ಚಾಲಕಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.