ರಂಗಭೂಮಿ ಸುವರ್ಣ ಮಹೋತ್ಸವದಲ್ಲಿ ಸೆಮಿನಾರ್, ನಾಟಕ ಉತ್ಸವ ಆಯೋಜನೆ

ನಮ್ಮ ಪ್ರತಿನಿಧಿ ವರದಿ

ಉಡುಪಿ  : ನಿನ್ನೆಯಿಂದ ಆರಂಭವಾದ ರಂಗಭೂಮಿ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭದ ಅಂಗವಾಗಿ ಡಿಸೆಂಬರ್ 14ರವರೆಗೆ  ಸೆಮಿನಾರ್‍ಗಳು, ಹೊಸ ಕಟ್ಟಡ ಉದ್ಘಾಟನೆ ಮತ್ತು ಐದು ದಿನಗಳ ನಾಟಕ ಉತ್ಸವ ನಡೆಯಲಿದೆ ಎಂದು ಸಂಘದ ಉಪಾಧ್ಯಕ್ಷ ಪಿ ವಾಸುದೇವ ರಾವ್ ಹೇಳಿದ್ದಾರೆ.

ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಐದು ದಿನಗಳ ನಾಟಕ ಉತ್ಸವದಲ್ಲಿ ಎಲ್ಲಾ ನಾಟಕಗಳು ಎಂಜಿಎಂ ಕಾಲೇಜು ಕ್ಯಾಂಪಸ್ಸಿನಲ್ಲಿ ಸಂಜೆ 6 ಗಂಟೆಯಿಂದ ಪ್ರದರ್ಶನಗೊಳ್ಳಲಿವೆ ಎಂದರು.

ವಿಚಾರ ಸಂಕಿರಣ : ಡಿ 11 ರಂದು ಬೆಳಿಗ್ಗೆ 10.30 ಕ್ಕೆ ರವೀಂದ್ರ ಮಂಟಪದಲ್ಲಿ `ನಾಟಕ ಮತ್ತು ಮಹಿಳೆ’ ಎಂಬ ವಿಷಯದಲ್ಲಿ ವಿಚಾರ ಸಂಕಿರಣ ನಡೆಯಲಿದೆ. ಬರಹಗಾರ್ತಿ ವೈದೇಹಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ಸೆಮಿನಾರ್ ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ನಡೆಯಲಿದೆ. ಮಾಧವಿ ಭಂಡಾರಿ, ಅಭಿಲಾಷಾ ಸೋಮಯಾಜಿ, ಕಾತ್ಯಾಯಿನಿ ಕುಂಜಿಬೆಟ್ಟು, ಚಂಪಾ ಶೆಟ್ಟಿ, ರಜನಿ ಗರುಡ್, ಪೂರ್ಣಿಮ ಸುರೇಶ್ ಮತ್ತು ಶಿಲ್ಪಾ ಜೋಶಿ ಸೆಮಿನಾರ್ ನಡೆಸಿಕೊಡಲಿದ್ದಾರೆ.

ಮಧ್ಯಾಹ್ನ ನಂತರದ ಅವಧಿಯಲ್ಲಿ ಆಧುನಿಕ ನಾಟಕಗಳು ಎದುರಿಸುತ್ತಿರುವ ಸವಾಲುಗಳು ಎಂಬ ವಿಚಾರವಾಗಿ ವಿಚಾರಸಂಕಿರಣ ನಡೆಯಲಿದೆ. ಹೆಗ್ಗೋಡು ನೀನಾಸಂ ಪ್ರಾಂಶುಪಾಲ ವೆಂಕಟರಮಣ ಐತಾಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಸೂರ್ಯಕಾಂತ್ ಗುಣಕಿಮಠ್, ಚಂದ್ರಹಾಸ ಉಳ್ಳಾಲ್, ಮೌನೀಶ್ ಬಡಿಗಾರ್, ಹರೀಶ್ ಭಟ್, ಸಿತಾರಾ, ಬಾಸುಮ ಕೊಡಗು ಸೆಮಿನಾರ್ ನಡೆಸಿಕೊಡಲಿದ್ದು, ರಂಗಕರ್ಮಿಗಳು ಭಾಗವಹಿಸಲಿದ್ದಾರೆ.

ಹೊಸ ಕಟ್ಟಡ : ದೊಡ್ಡನಗುಡ್ಡೆ ಸಮೀಪದ ಕರಂಬಳ್ಳಿ ಎಂಬಲ್ಲಿ ನಿರ್ಮಿಸಲಾಗಿರುವ ರಂಗಭೂಮಿಯ ಹೊಸ ಕಟ್ಟಡವನ್ನು ಡಿಸೆಂಬರ್ 12 ರಂದು ರಾಜ್ಯ ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿದ್ದಾರೆ.