`ಈಗ ಅತ್ಯುತ್ತಮ ವಿದ್ಯಾರ್ಥಿಗಳು ಬೋಧಕ ವೃತ್ತಿ ಆಯ್ಕೆ ಮಾಡುತ್ತಿಲ್ಲ’

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಇಂಜಿನಿಯರಿಂಗ್, ಎಂಬಿಎ, ಎಂಬಿಬಿಎಸ್ ಅಥವಾ ಇಂತಹ ಇನ್ನಿತರ ಆಕರ್ಷಕ ವೃತ್ತಿಪರ ಕೋರ್ಸುಗಳಿಗೆ ಅತ್ಯುತ್ತಮ ವಿದ್ಯಾರ್ಥಿಗಳು ಆಕರ್ಷಿತರಾಗುತ್ತಿದ್ದು, ಇಂತಹ ಕೋರ್ಸುಗಳನ್ನೇ ಆಯ್ಕೆ ಮಾಡುಕೊಳ್ಳುತ್ತಿರುವುದರಿಂದ ಸಮಾಜದಲ್ಲಿ ಅರ್ಹ ಬೋಧಕರ ಕೊರತೆ ಸಮಸ್ಯೆ ಎದುರಾಗಿದೆ ಎಂದು ಜಿಸ್ಯೂಟ್ ಎಜ್ಯುಕೇಷನಲ್ ಎಸೋಸಿಯೇಷನ್ನಿನ ಸೌತ್ ಏಷ್ಯಾ ಸೆಕ್ರೆಟರಿ ರೆವರೆಂಡ್ ಫಾದರ್ ಸುನ್ನಿ ಜ್ಯಾಕೋಬ್ ಹೇಳಿದ್ದಾರೆ.

ಗುರುವಾರ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಸಿಲ್ವೆಸ್ಟರ್ ಟ್ರೆಸ್ಸಿ ಫ್ರ್ಯಾಂಕ್ ಸಂಘಟಿಸಿದ್ದ ಭಾರತದಲ್ಲಿ ಕ್ಯಾಥೋಲಿಕ್ ಶಿಕ್ಷಣದ ಸವಾಲುಗಳು ಮತ್ತು ಅವಕಾಶಗಳು-ಕ್ಲಿಷ್ಟಕರ ಪ್ರತಿಸ್ಪಂದನೆ ಎಂಬ ವಿಚಾರವಾಗಿ ಏರ್ಪಡಿಸಿದ್ದ ವಿಚಾರಸಂಕಿರಣದಲ್ಲಿ ಸಂಸ್ಥೆಯ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಪ್ರಸಕ್ತ ಬೋಧಕ ವೃತ್ತಿಯನ್ನು ಆರಿಸಿಕೊಂಡಿರುವ ಹೆಚ್ಚಿನ ಬೋಧಕರು ತಮ್ಮ ವಿದ್ಯಾರ್ಥಿಗಳನ್ನು ಶಿಕ್ಷಿತರನ್ನಾಗಿ ಮಾಡುವ ನೈಜ ಆಸಕ್ತಿಯನ್ನು ಹೊಂದಿಲ್ಲ. ಇವರು ಕಲಿಯುವಿಕೆ ಗುರಿಯಲ್ಲ, ಗಳಿಕೆಯೆ ಗುರಿ ಎಂದು ಭಾವಿಸಿಕೊಂಡಿರುತ್ತಾರೆ ಎಂದು ಹೇಳಿದರು. ಇದೇ ವೇಳೆ ರೆವರೆಂಡ್ ಫಾದರ್ ಸುನ್ನಿ ಜ್ಯಾಕೋಬ್, ಸಮಾಜದಲ್ಲಿ ಹೆಚ್ಚುತ್ತಿರುವ ಕೋಮುವಾದ ಚಿಂತನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಸಂಕುಚಿತ ಮನೋಭಾವನೆಯ ವ್ಯಕ್ತಿಗಳು ಇಂತಹ ಕೃತ್ಯಗಳಲ್ಲಿ ತೊಡಗುತ್ತಾರೆ. ಭಾರತ ಪ್ರಜಾಸತ್ತಾತ್ಮಕ ಸಂಪ್ರದಾಯಗಳು, ಸಂವಿಧಾನತ್ಮಕ ಮೌಲ್ಯಗಳನ್ನು ಹೊಂದಿರುವ ದೇಶ ಎಂಬುದನ್ನು ಇಂತಹ ಜನರು ಅರ್ಥೈಸಿಕೊಳ್ಳಬೇಕು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.