ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

ಸಾಂದರ್ಭಿಕ ಚಿತ್ರ

ಉಪ್ಪಿನಂಗಡಿ : ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಬೀಜದಪಳಿಕೆ ಎಂಬಲ್ಲಿ ಮಂಗಳವಾರ ನಡೆದಿದೆ.

ಬೀಜದಪಳಿಕೆ ನಿವಾಸಿ ಜಿನ್ನಪ್ಪ ಗೌಡ ಎಂಬವರ ಪುತ್ರ ರಮೇಶ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಕೂಲಿ ಕಾರ್ಮಿಕನಾಗಿರುವ ಈತ ಮಂಗಳವಾರ ಬೆಳಗ್ಗೆ ಎಂದಿನಂತೆ ಕೂಲಿ ಕೆಲಸಕ್ಕೆ ತೆರಳಿದ್ದು, ಕೂಲಿ ಕೆಲಸವನ್ನು ಅರ್ಧದಲ್ಲಿಯೇ ಬಿಟ್ಟು ಪೂರ್ವಾಹ್ನ 11:15ರ ಸುಮಾರಿಗೆ ಮನೆಗೆ ಬಂದು ಮನೆಯೊಳಗೆ ಬಾಗಿಲಿನ ಚಿಲಕ ಹಾಕಿ ಈ ಕೃತ್ಯವೆಸಗಿದ್ದಾನೆ. ಮನೆಯೊಳಗೆ ಬೊಬ್ಬೆ ಕೇಳಿ ಮನೆಯ ಹೊರಗಡೆ ಇದ್ದ ಈತನ ತಂದೆ ಕಿಟಕಿಯ ಮೂಲಕ ನೋಡಿದಾಗ ಸೀಮೆ ಎಣ್ಣೆ ಸುರಿದು ಈತ ಮೈಮೇಲೆ ಬೆಂಕಿ ಹಚ್ಚಿರುವುದು ಕಂಡು ಬಂದಿದೆ. ಬಳಿಕ ಈತನ ಮನೆಯವರ ಬೊಬ್ಬೆ ಕೇಳಿ ಅಲ್ಲಿಗೆ ಬಂದ ಸ್ಥಳೀಯರು ಬಾಗಿಲು ಒಡೆದು ಒಳಪ್ರವೇಶಿಸಿ, ಬೆಂಕಿ ನಂದಿಸಿದರಾದರೂ, ಅಷ್ಟರಲ್ಲೇ ಈತ ಮೃತಪಟ್ಟಿದ್ದಾನೆ. ಮದ್ಯ ವ್ಯಸನಿಯಾಗಿದ್ದ ಈತ ಇದೇ ಕಾರಣಕ್ಕೆ ಈ ಕೃತ್ಯವೆಸಗಿರಬಹುದೆಂದು ಮೃತನ ತಂದೆ ಜಿನ್ನಪ್ಪ ಗೌಡ ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.