ಸ್ವಯಂಘೋಷಿತ ತೆರಿಗೆ ಬಿಜೆಪಿ ಕಾಲದಲ್ಲಾಗಿದ್ದು : ಮೇಯರ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ಸ್ವಯಂಘೋಷಿತ ಆಸ್ತಿ ತೆರಿಗೆ ಜಾರಿಯಾಗಿದ್ದು 2008ರಲ್ಲಿ ಬಿಜೆಪಿ ಸರಕಾರವಿದ್ದಾಗ. ಅಂದು ಪಾಲಿಕೆಯಲ್ಲಿ ಬಿಜೆಪಿ ಸರಕಾರದ ಅಧಿಕೃತರೇ ಇದನ್ನು ಜಾರಿಗೊಳಿಸಿದ್ದು, ಇದೀಗ ನಮ್ಮ ತಲೆಗೆ ಕಟ್ಟುತ್ತಿದ್ದಾರೆ” ಎಂದು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಹರಿನಾಥ್ ಆರೋಪಿಸಿದರು.

ಮಂಗಳೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಆಸ್ತಿ ತೆರಿಗೆ ಹೆಚ್ಚಳ ಮಾಡಿದ್ದು ಸರ್ಕಾರದ ಆದೇಶ. ಸರ್ಕಾರಿ ಆದೇಶ ಪಾಲಿಸದಿದ್ದರೆ ಸರ್ಕಾರದ ಅನುದಾನ ಕಡಿತಗೊಳ್ಳುವ ಭೀತಿಯಿದೆ. ಬಿಜೆಪಿ ಆಡಳಿತಾವಧಿಯಲ್ಲೂ ತೆರಿಗೆ ಹೆಚ್ಚಳವಾಗಿದೆ. ಶೇ 15ರಷ್ಟು ಏರಿಕೆ ಮಾಡಲಾಗಿದೆ. ಅಭಿವೃದ್ಧಿಗಾಗಿ ಇದು ಅಗತ್ಯ. ಇದು 2008ರಲ್ಲಿ ಜಾರಿಯಾಗಿದೆ. ಬಿಜೆಪಿಗರು ಇದನ್ನು ಜಾರಿಗೊಳಿಸಿ ಇದೀಗ ನಮ್ಮ ತಲೆಗೆ ಕಟ್ಟುತ್ತಿದ್ದಾರೆ” ಎಂದು ಸ್ಪಷ್ಟನೆ ನೀಡಿದರು.

ಇತ್ತೀಚೆಗೆ ನಡೆದ ಮಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲಿ ತೆರಿಗೆ ಪರಿಷ್ಕರಣೆ ಕುರಿತಂತೆ ಬಹಳಷ್ಟು ಗೊಂದಲದ ಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಪಾಲಿಕೆಯ ಪ್ರತಿಪಕ್ಷ ಬಿಜೆಪಿ ಸೇರಿದಂತೆ ಪಕ್ಷೇತರರು ವಿರೋಧಿಸಿದ್ದರು. ಬಳಿಕ ಕಾಂಗ್ರೆಸ್ಸಿನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ಹೊಡೆದಿದ್ದರು.

“ತೆರಿಗೆ ಹಣವನ್ನು ಸಂಗ್ರಹಿಸದೇ ಆದಾಯ ವೃದ್ಧಿಪಡಿಸಲು ಸಾದ್ಯವಿಲ್ಲವೇ ? ಸೋರಿಕೆಯನ್ನು ತಡೆಗಟ್ಟಿ ಅಭಿವೃದ್ಧಿ ಪಡಿಸಿ, ಎಲ್ಲೆಲ್ಲೂ ಈ ಬಗ್ಗೆ ಗಮನ ಹರಿಸಿ” ಎಂದು ಪೂಜಾರಿ ಸೂಚಿಸಿದ್ದರು.