ಠಾಣೆಯೆದುರು ಮುಟ್ಟುಗೋಲು ಹಾಕಿದ ವಾಹನಗಳಿಂದ ರಸ್ತೆ ಸಂಚಾರಕ್ಕೆ ಅಡ್ಡಿ

ಠಾಣೆಯೆದುರು ತಂದಿಟ್ಟ ಅಪಘಾತಕ್ಕೀಡಾದ ವಾಹನ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಒಂದೆಡೆ ಮಂಗಳೂರು ನಗರ ಪೊಲೀಸರು ಟ್ರಾಫಿಕ್ ದಟ್ಟಣೆಯನ್ನು ಕಡಿಮೆಗೊಳಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರೆ, ಇನ್ನೊಂದೆಡೆ ತಮ್ಮ ಮೂಗಿನಡಿಯಲ್ಲೇ ಇರುವ ಸಮಸ್ಯೆಗಳನ್ನು ಬಗೆಹರಿಸಲು ವಿಫಲರಾಗುತ್ತಿದ್ದಾರೆ. ಇದೇ ಕಾರಣಕ್ಕೆ ಸಮಸ್ಯೆಗಳನ್ನು ಬಗೆಹರಿಸೋದಿಕ್ಕೆ ಒದ್ದಾಡುತ್ತಿದ್ದಾರೆ.

ಮುಖ್ಯವಾಗಿ ಮಂಗಳೂರು ನಗರ ಪೊಲೀಸ್ ಠಾಣೆಗಳ ಹೊರಭಾಗದಲ್ಲಿ ವಿವಿಧ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿ ಮುಟ್ಟುಗೋಲು ಹಾಕಲಾಗಿರುವ ವಾಹನಗಳು ಟ್ರಾಫಿಕ್ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ. ಇವುಗಳನ್ನು ಪೊಲೀಸ್ ಠಾಣೆಯ ಹೊರಭಾಗದಲ್ಲಿ ಇಲ್ಲವೇ ರಸ್ತೆ ಪಕ್ಕದಲ್ಲೇ ತಂದು ಹಾಕಿರುವುದು ವಾಹನಗಳ ಸರಾಗ ಸಂಚಾರಕ್ಕೆ ಅಡ್ಡಿಯಾಗಿದೆ.

ನಗರದ ಬಹುತೇಕ ಪೊಲೀಸ್ ಠಾಣೆಗಳ ಹೊರಭಾಗದಲ್ಲಿ ಇಂತಹದ್ದೇ ಅವಸ್ಥೆ ಕಂಡು ಬರುತ್ತಿದೆ. ಅದೂ ಭಾರೀ ವಾಹನಗಳನ್ನು, ರಸ್ತೆ ಪಕ್ಕವೇ ಪಾರ್ಕಿಂಗ್ ಮಾಡಲಾಗುತ್ತಿದೆ. ಮುಖ್ಯವಾಗಿ ಮಂಗಳೂರು ಪೂರ್ವ ಠಾಣೆ (ಕದ್ರಿ) ಪರಿಸರದಲ್ಲಿ ಇರಿಸಲಾಗಿರುವ ವಾಹನಗಳು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಇಷ್ಟೇ ಅಲ್ಲ ಠಾಣೆ ಮುಂಭಾಗದಲ್ಲಿರುವ ಸಾತಂತ್ರ್ಯ ಹೋರಾಟಗಾರರ ಉದ್ಯಾನದ ಸುತ್ತಲೂ ವಾಹನಗಳನ್ನು ತಂದಿರಿಸಿರುವುದು ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ವಿವಿಧ ಕ್ರಿಮಿನಲ್ ಪ್ರಕರಣಗಳು, ರಸ್ತೆ ಅಪಘಾತಗಳು, ನ್ಯಾಯಾಲಯದ ವಿಚಾರಣೆಯಲ್ಲಿರುವ ವಾಹನಗಳನ್ನು ತಂದು ಪೊಲೀಸ್ ಠಾಣೆ ಮುಂಭಾಗ, ರಸ್ತೆ ಪಕ್ಕದಲ್ಲಿ ತಂದಿಡಲಾಗಿದೆ.

ಮಂಗಳೂರು ಗ್ರಾಮಾಂತರ ಠಾಣೆ ಪರಿಸರದಲ್ಲಿ ನಾವು ಹಲವು ವಾಹನಗಳನ್ನು ಕೊಂಡು ಹೋಗಿ ಇರಿಸಿದ್ದೇವೆ. ಇಲ್ಲಿ ಇಡಲಾಗಿರುವ ವಾಹನಗಳಿಂದ ಯಾರಿಗೂ ಸಮಸ್ಯೆ ಆಗುತ್ತಿಲ್ಲ. ಆದರೂ ಇಲ್ಲಿ ವಾಹನಗಳು ತುಂಬಿ ಹೋಗಿದೆ. ಹೆಚ್ಚಿನ ಖಾಲಿ ಜಾಗ ಮುಟ್ಟುಗೋಲು ಹಾಕಿಕೊಂಡ ವಾಹನಗಳನ್ನು ಇರಿಸಲೆಂದೇ ಇಟ್ಟಿದ್ದೇವೆ. ಮುಟ್ಟುಗೋಲು ಹಾಕಿಕೊಳ್ಳಲಾದ ಲಾರಿಗಳೂ ಇಲ್ಲಿವೆ. ಬಂದರು ಮತ್ತು ಕೊಣಾಜೆ ಪೊಲೀಸ್ ಠಾಣೆಗಳ ಪರಿಸರದ ಸ್ಥಿತಿಯೂ ಇದೇ ರೀತಿಯಾಗಿದೆ. ಠಾಣೆಗೆ ಆಗಮಿಸುವ ಮಂದಿಯ ವಾಹನಗಳನ್ನು ಪಾರ್ಕಿಂಗ್ ಮಾಡುವುದೇ ಸಮಸ್ಯೆಯಾಗಿದೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಯೊಬ್ಬರು.