ಕಪ್ಪತಗುಡ್ಡ ಹೋರಾಟದ ಅಖಾಡಕ್ಕಿಳಿದ ಸ್ವಾಮಿಗಳು

ಅಕ್ರಮ ಗಣಿಗಾರಿಕೆಯ ವಿರುದ್ಧ ಹೋರಾಡುತ್ತಲೇ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ಸರ್ಕಾರ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದೇ ಭಾವಿಸಲಾಗಿತ್ತು.  ಆದರೆ ರಾಜ್ಯ ಸರ್ಕಾರ ಹಠಾತ್ತನೆ ಈ ಪ್ರದೇಶವನ್ನು ಡಿ-ನೋಟಿಫೈ ಮಾಡಲು ನಿರ್ಧರಿಸಿರುವುದು ಅಚ್ಚರಿ ಮೂಡಿಸಿದೆ.

ಕರ್ನಾಟಕದ ಕೇಂದ್ರ ಪ್ರಾಂತ್ಯದ ಸಸ್ಯ ಹಾಗು ಜೀವಚರ ಜಗತ್ತನ್ನು ಕಾಪಾಡಲು ಮುಂದಾಗಿರುವ ರಾಜ್ಯದ ಜನತೆ ಸಿದ್ಧರಾಮಯ್ಯ ಸರ್ಕಾರದ ವಿರುದ್ಧ ಅವಿರತ ಹೋರಾಟದಲ್ಲಿ ತೊಡಗಿದ್ದು ಇದೀಗ ರಾಜ್ಯದ ಹಲವಾರು ಮಠಾಧೀಶರು ಹೋರಾಟಕ್ಕೆ ಧುಮುಕಿದ್ದಾರೆ.

ಗದಗ ಜಿಲ್ಲೆಯ ಕಪ್ಪತಗುಡ್ಡ ಮೀಸಲು ಅರಣ್ಯ ಪ್ರದೇಶದಲ್ಲಿ 17872 ಹೆಕ್ಟೇರ್ ಪ್ರದೇಶವನ್ನು ಡಿ-ನೋಟಿಫೈ ಮಾಡುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಪ್ರಬಲ ಹೋರಾಟ ರೂಪುಗೊಂಡಿದ್ದು ಇಲ್ಲಿ ನಡೆಯಲಿರುವ ಗಣಿಗಾರಿಕೆಯನ್ನು ವಿರೋಧಿಸಿ ಅನೇಕ ಮಠಾಧೀಶರು ಹೋರಾಟಕ್ಕೆ ಸಜ್ಜಾಗಿದ್ದಾರೆ.

ರಾಜ್ಯದ ಪರಿಸರ ರಕ್ಷಣೆಗಾಗಿ ಮಠಾಧೀಶರು ಮುಂದಾಗಿರುವ ಎರಡನೆ ಪ್ರಸಂಗ ಇದಾಗಿದೆ. 1990ರಲ್ಲಿ ಶಿರಸಿಯ ಸ್ವರ್ಣವಲ್ಲಿಯ ಗಂಗಾಧರೇಂದ್ರ ಸರಸ್ವತಿ ಸ್ವಾಮಿಯವರು ಅಘನಾಶಿನಿ ಮತ್ತು ಬೆಡ್ತಿ ಜಲವಿದ್ಯುತ್ ಯೋಜನೆಗಳ ವಿರುದ್ಧ ಹೋರಾಟಕ್ಕೆ ಮುಂದಾಳತ್ವ ವಹಿಸಿದ್ದರು. ಪ್ರತಿಭಟನೆಗೆ ಮಣಿದ ಬಂಗಾರಪ್ಪ ಸರ್ಕಾರ ಯೋಜನೆಯನ್ನು ಕೈಬಿಟ್ಟಿತ್ತು. ಇಲ್ಲವಾದಲ್ಲಿ ಪಶ್ಚಿಮ ಘಟ್ಟದ ವ್ಯಾಪಕ ಪ್ರದೇಶ ಮುಳುಗಡೆಯಾಗುತ್ತಿತ್ತು. ಹಸಿರು ಸ್ವಾಮೀಜಿ ಎಂದೇ ಹೆಸರಾದ ಇವರ ಮಾರ್ಗದಲ್ಲೇ ಈಗ ಗದಗಿನ ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮೀಜಿ ಕಪ್ಪತ್ತಗುಡ್ಡ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.

ರಾಜ್ಯ ವನ್ಯಜೀವಿ ಮಂಡಲಿಯ ಶಿಫಾರಸಿನ ಆಧಾರದ ಮೇಲೆ ರಾಜ್ಯ ಸರ್ಕಾರ ಕಪ್ಪತಗುಡ್ಡದ 17872 ಹೆಕ್ಟೇರ್ ಪ್ರದೇಶವನ್ನು ಡಿನೋಟಿಫೈ ಮಾಡಿದ್ದು ಗಣಿಗಾರಿಕೆಗೆ ಅವಕಾಶ ಮಾಡಿಕೊಡಲಿದೆ. ಗದಗಿನ ಬಳಿ ಇರುವ ಪಶ್ಚಿಮ ಘಟ್ಟದ ಸಾಲಿನಲ್ಲಿ ಅಳಿವಿನಂಚಿನಲ್ಲಿರುವ ಅನೇಕ ಪ್ರಬೇಧಗಳಿದ್ದು ದಟ್ಟ ಅರಣ್ಯವೂ ಇದೆ. ಈ ಪ್ರದೇಶದಲ್ಲಿ ಕೆಲವು ಪವನ ವಿದ್ಯುತ್ ಘಟಕಗಳು ಸ್ಥಾಪನೆಯಾದರೂ ಅರಣ್ಯ ಪ್ರದೇಶ ಸುರಕ್ಷಿತವಾಗಿತ್ತು. ಅರಣ್ಯ ಮತ್ತು ಸಸ್ಯ ಸಂಪತ್ತಿನೊಂದಿಗೇ ಕಪ್ಪತಗುಡ್ಡ ಪ್ರದೇಶದಲ್ಲಿ ಕಬ್ಬಿಣದ ಅದಿರು, ಮ್ಯಾಂಗನೀಸ್ ಮತ್ತು ಬಾಕ್ಸೈಟ್ ಅದಿರು ಸಹ ಹೇರಳವಾಗಿ ದೊರೆಯುತ್ತದೆ ಎನ್ನಲಾಗಿದೆ.

ಬಳ್ಳಾರಿ ಗಣಿ ಉದ್ಯಮ ಸ್ಥಗಿತಗೊಂಡ ನಂತರ ತಮ್ಮ ಉದ್ಯಮದ ಮುನ್ನಡೆಗೆ ತಡಕಾಡುತ್ತಿರುವ ಗಣಿ ಧಣಿಗಳು ಕಪ್ಪತಗುಡ್ಡಕ್ಕೆ ಲಗ್ಗೆ ಹಾಕಿದ್ದಾರೆ. ಈ ಪ್ರದೇಶದಲ್ಲಿ ಅತಿಕ್ರಮಣ ಮಾಡಲಾರದೆ ಸರ್ಕಾರದ ಮೇಲೆ ಒತ್ತಡ ಹೇರಿ ಇಡೀ ಬೆಟ್ಟ ಪ್ರದೇಶವನ್ನು ಡಿನೋಟಿಫೈ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಕ್ರಮ ಗಣಿಗಾರಿಕೆಯ ವಿರುದ್ಧ ಹೋರಾಡುತ್ತಲೇ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ಸರ್ಕಾರ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದೇ ಭಾವಿಸಲಾಗಿತ್ತು.  ಆದರೆ ರಾಜ್ಯ ಸರ್ಕಾರ ಹಠಾತ್ತನೆ ಈ ಪ್ರದೇಶವನ್ನು ಡಿ-ನೋಟಿಫೈ ಮಾಡಲು ನಿರ್ಧರಿಸಿರುವುದು ಅಚ್ಚರಿ ಮೂಡಿಸಿದೆ. ಇದು ಸಿದ್ದರಾಮಯ್ಯ ಸರ್ಕಾರದ ದ್ವಿಮುಖ ನೀತಿಯನ್ನು ಬಿಂಬಿಸುವುದೇ ಅಲ್ಲದೆ  ಗದಗ್ ಪ್ರಾಂತ್ಯದ ಮಠಾಧೀಶರನ್ನು ಹೋರಾಟಕ್ಕೆ ಧುಮುಕುವಂತೆ ಮಾಡಿದೆ.

ಉತ್ತರ ಕರ್ನಾಟಕದ ಎಲ್ಲ ಸ್ವಾಮಿಗಳೂ ಕಪ್ಪತ್ತಗುಡ್ಡ ರಕ್ಷಣೆಗಾಗಿ ಹೋರಾಡಲು ಮುಂದಾಗಿದ್ದಾರೆ.  ಕಳೆದ ಶುಕ್ರವಾರ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. `ರಾಜ್ಯ ಸರ್ಕಾರ ಗಣಿಗಾರಿಕೆಯ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ, ಹಾಗಾಗಿ ಕಪ್ಪತ್ತ ಗುಡ್ಡದಲ್ಲಿ ಯಾವುದೇ ರೀತಿಯ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂಬ ಭರವಸೆ ನಮಗಿದೆ’ ಎಂದು ನಿರ್ಮಲಾನಂದ ಸ್ವಾಮೀಜಿ ಹೇಳಿದ್ದಾರೆ.

ಈ ಗಣಿಗಾರಿಕೆಯಿಂದ ಪಶ್ಚಿಮ ಘಟ್ಟದ ಅಮೂಲ್ಯ ಅರಣ್ಯ ಸಂಪತ್ತು ನಾಶವಾಗುವುದೇ ಅಲ್ಲದೆ ವನ್ಯಜೀವಿ ಸಂತತಿಯೂ ಅಳಿಯುತ್ತದೆ ಎಂದು ಚುಂಚನಗಿರಿ ಮಠಾಧೀಶರು ಹೇಳಿದ್ದಾರೆ. ಕಪ್ಪತಗುಡ್ಡ ರಕ್ಷಣೆಗಾಗಿ ತೋಂಟದಾರ್ಯ ಸ್ವಾಮೀಜಿಗಳ ಹೋರಾಟಕ್ಕೆ ಎಲ್ಲ ಮಠಾಧೀಶರೂ ಬೆಂಬಲಿಸುವುದಾಗಿ ನಿರ್ಮಲಾನಂದ ಸ್ವಾಮೀಜಿ ಹೇಳಿದ್ದಾರೆ. ಮಾಜಿ ಪ್ರಧಾನಿ, ಜೆಡಿಎಸ್ ನಾಯಕ ಹೆಚ್ ಡಿ ದೇವೇಗೌಡ ಸಹ ಈ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ.