ಮೂಢನಂಬಿಕೆ ವಿರೋಧಿ ಶಾಸನ ತ್ವರಿತ ಜಾರಿಗೆ ಸಂತರ ಒತ್ತಾಯ

ರಾಜ್ಯ ಸರಕಾರದ ನಿಷೇಧಗಳ ಪಟ್ಟಿಯಲ್ಲಿ ಜ್ಯೋತಿಷ್ಯ , ವಾಸ್ತು , ಸಂಖ್ಯಾಶಾಸ್ತ್ರ , ಹಸ್ತಸಾಮುದ್ರಿಕ ಮತ್ತು ಜಾತಕ  ಓದುವುದು  ಒಳಗೊಂಡಿಲ್ಲ

ಬೆಂಗಳೂರು : ಮೂಢನಂಬಿಕೆ ವಿರೋಧಿ ಶಾಸನ ಜಾರಿ ವಿಳಂಬಕ್ಕೆ ವಿವಿಧ ಮಠಗಳ ಸಂತರ ಗುಂಪೊಂದು ಅಸಮಾಧಾನ ವ್ಯಕ್ತಪಡಿಸಿದೆ.

ಸುಮಾರು 50 ಸಂತರ ನ್ನೊಳಗೊಂಡ ನಿಯೋಗವೊಂದು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ರಾಜ್ಯ ಶಾಸಕಾಂಗದ ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡನೆ ಮಾಡುವಂತೆ ಒತ್ತಾಯಿಸಿದ್ದಾರೆ.

ಸಭೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ನಿಯೋಗದ ಮುಖಂಡ ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮಿ, “ಮೂಢನಂಬಿಕೆಗಳ ಮೂಲಕ ಅಮಾಯಕ ಜನರನ್ನು ವಂಚಿಸಿ ಶೋಷಿಸುವ ನೀಚಬುದ್ಧಿಗೆ ತಡೆ ವಿಧಿಸುವ ನಿಟ್ಟಿನಲ್ಲಿ ಈ ಶಾಸನ ಅಗತ್ಯವಾಗಿದೆ. ಈ ಕುರಿತು ಮುಖ್ಯಮಂತ್ರಿಗಳ ಜೊತೆಗೆ ಮಾತುಕತೆ ನಡೆಸಿದಾಗ ಅವರು ನಮ್ಮ ಬೇಡಿಕೆಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ” ಎಂದು ಹೇಳಿದ್ದಾರೆ.

“ಕರಡು ಮಸೂದೆಯನ್ನು ಪರಿಶೀಲಿಸಿದ ಕ್ಯಾಬಿನೆಟ್ ಉಪಸಮಿತಿ ಅದನ್ನು ಮುಂದೆ ತರಲು ಯಾವುದೇ ಪ್ರಯತ್ನ ಮಾಡಲಿಲ್ಲ. ಮಸೂದೆಯಲ್ಲಿರುವ ಕೆಲವು ವಿವಾದಾತ್ಮಕ ಅಂಶಗಳನ್ನು ಈಗಾಗಲೇ ಕೈಬಿಡಲಾಗಿದೆ. ಹಾಗಾಗಿ ಮಸೂದೆಯನ್ನು ಹಿಡಿದಿಟ್ಟುಕೊಳ್ಳುವ ಯಾವುದೇ ಅಗತ್ಯವಿಲ್ಲ” ಎಂದು ಈ ಧಾರ್ಮಿಕ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಮೂಲಗಳ ಪ್ರಕಾರ ಈ ಮಸೂದೆಯು ಭೂತೋಚ್ಛಾಟನೆ, ಮಾಟ-ಮಂತ್ರ, ಅಗೋರಿ, ಮಡೆಸ್ನಾನ, ಶಿಶುಗಳನ್ನು ಎತ್ತರದಿಂದ ಕೆಳಕ್ಕೆ ಹಾಸಿಗೆ ಮೇಲೆ ಎಸೆಯುವುದು, ಹೆಣ್ಮಕ್ಕಳನ್ನು ಬೆತ್ತಲೆ ಮೆರವಣಿಗೆ ಮಾಡಿಸುವುದು, ಅಲೌಕಿಕ ಶಕ್ತಿ ಪ್ರಚೋದನೆ ನೆಪದಲ್ಲಿ ಲೈಂಗಿಕ ಶೋಷಣೆ ಮತ್ತು ಪ್ರಾಣಿಗಳ ವಧೆ ಮೊದಲಾದ ಸುಮಾರು 23ಕ್ಕೂ ಅಧಿಕ ನಂಬಿಕೆಗಳನ್ನು ನಿಷೇಧಿಸುವ ಪ್ರಸ್ತಾವ ಒಳಗೊಂಡಿದೆ.

“ಇದೇ ವೇಳೆ ನಿಷೇಧಗಳ ಪಟ್ಟಿಯಲ್ಲಿ ಜ್ಯೋತಿಷ್ಯ, ವಾಸ್ತು, ಸಂಖ್ಯಾಶಾಸ್ತ್ರ, ಹಸ್ತಸಾಮುದ್ರಿಕ ಶಾಸ್ತ್ರ ಮತ್ತು ಜಾತಕ  ಓದುವುದು ಇತ್ಯಾದಿಗಳು ಒಳಗೊಂಡಿಲ್ಲ. ಕರಡು ಮಸೂದೆಯನ್ನು ಕ್ಯಾಬಿನೆಟ್ ಉಪಸಮಿತಿ ಪರಿಶೀಲಿಸಿದ ಬಳಿಕ ರಾ                ಜ್ಯ ಸಚಿವಾಲಯ ಚರ್ಚಿಸಿ ನಂತರ ಮಸೂದೆ ಜಾರಿಗೊಳಿಸಲಾಗುವುದು” ಎಂದು ಪತ್ರಕರ್ತರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.