ಮೆಣಸು ವ್ಯಾಪಾರಿ ಮನೆ ಮುಂದೆ ಸ್ವಾಮಿ ಧರಣಿ

ಹಳೆ ನೋಟಿಗೆ ಹೊಸದು ನೀಡುವುದಾಗಿ ಕೋಟಿ ರೂ ವಂಚನೆ !

ಹಾವೇರಿ : ಹಳೆ ನೋಟುಗಳಿಗೆ ಹೊಸ ಕರೆನ್ಸಿ ನೋಟು ನೀಡುವುದಾಗಿ ಇಲ್ಲಿನ ಸ್ವಾಮಿಯೊಬ್ಬರಿಗೆ ಭರವಸೆ ನೀಡಿದ ಹಾವೇರಿಯ ಮೆಣಸು ಖರೀದಿದಾರನೊಬ್ಬ ಒಂದು ಕೋಟಿ ರೂ ವಂಚಿಸಿದ್ದು, ಕಳೆದುಕೊಂಡಿರುವ ಹಣ ಮರಳಿ ಪಡೆಯುವುದಕ್ಕಾಗಿ ಈಗ ಆರೋಪಿಯ ಮನೆ ಮುಂದೆ ಸ್ವಾಮಿ ಧರಣಿ ಆರಂಭಿಸಿದ್ದಾರೆ.

ಹಣ ವಂಚನೆಗೊಳಗಾಗಿರುವ ಹಾವೇರಿಯ ದತ್ತಾತ್ರೇಯ ಅವಧೂತ ಸ್ವಾಮಿ ತನ್ನ ಬೆಂಬಲಿಗರ ಜೊತೆಗೂಡಿ ಆರೋಪಿ ದಡಪೀರ್ ಭೂಶಿಯ ಮನೆ ಮುಂದೆ ಭಾನುವಾರದಿಂದ ಧರಣಿ ಕುಳಿತ್ತಿದ್ದಾರೆ. ಸ್ವಾಮಿಯಿಂದ ಒಂದು ಕೋಟಿ ರೂ ಪಡೆದುಕೊಂಡಿರುವ ಭೂಶಿ ಈಗ ಪೊಲೀಸರಿಂದ ತಲೆಮರೆಸಿಕೊಂಡಿದ್ದಾನೆ.

ಸ್ವಾಮಿಯು ಹಾವೇರಿಯಲ್ಲಿ ಸಣ್ಣ ಸಂಸ್ಥೆಯೊಂದನ್ನು ಸಂಚಾಲಿಸುತ್ತಿದ್ದು, ಹುಬ್ಬಳ್ಳಿಗೆ ಹತ್ತಿರದ ಕುಂದಗೋಳದಲ್ಲಿ ಹೊಸ ಆಶ್ರಮ ಕಟ್ಟಡ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದರು. ಅವರು ಭಕ್ತಾದಿಗಳಿಂದ ಕಟ್ಟಡಕ್ಕಾಗಿ ದೇಣಿಗೆ ಸಂಗ್ರಹಿಸಿದ್ದರು. ಹೊಸ ಆಶ್ರಮಕ್ಕಾಗಿ ಅವರು ಕುಂದಗೋಳದಲ್ಲಿ ಸೂಕ್ತ ಜಾಗವೊಂದನ್ನೂ ಗುರುತಿಸಿದ್ದರು.

ಭೂಶಿಯು ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದ ನಿವಾಸಿಯಾಗಿದ್ದು, ಬ್ಯಾಡಗಿ ಎಪಿಎಂಸಿ ಯಾರ್ಡಿನಲ್ಲಿ ಮೆಣಸಿನ ಅಂಗಡಿ ಇಟ್ಟುಕೊಂಡಿದ್ದಾನೆ. ನವಂಬರ್ 18ರಂದು ಮಧ್ಯವರ್ತಿ ಜಾಫರ್ ಮೂಲಕ ಸ್ವಾಮಿಯಿಂದ ಭೂಶಿ ಒಂದು ಕೋಟಿ ರೂ ಹಳೆಯ ನೋಟು ಸ್ವೀಕರಿಸಿದ್ದ.

ಸ್ವಾಮಿ ಯಾವುದೇ ಬ್ಯಾಂಕ್ ಖಾತೆ ಹೊಂದಿಲ್ಲ. ಆದ್ದರಿಂದ ಅವರು, ಒಂದು ಕೋಟಿ ರೂಪಾಯಿಗೆ 25 ಲಕ್ಷ ರೂ ಕಮಿಶನ್ ಕಳೆದುಕೊಂಡು, 75 ಲಕ್ಷ ರೂ ಹೊಸ ನೋಟು ಪಡೆಯಲು ಭೂಶಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ಒಂದು ಎಕ್ರೆ ಜಾಗ ನೀಡುವುದಾಗಿಯೂ ಭೂಶಿ ಭರವಸೆ ನೀಡಿದ್ದ. ಅಚ್ಚರಿಯೆಂದರೆ, ಭೂಶಿ ನಾಪತ್ತೆಯಾಗುವುದಕ್ಕಿಂತ ಮುಂಚೆ ಸ್ವಾಮಿಯ ಸಂಬಂಧಿಯ ಬ್ಯಾಂಕ್ ಖಾತೆಗೆ 15 ಲಕ್ಷ ರೂ ಜಮೆ ಮಾಡಿದ್ದ.

ಸ್ವಾಮಿಯು ಉಳಿದ ಹಣ ಕೇಳಿದರೆ ಭೂಶಿ ನಿರಾಕರಿಸಿದ್ದಲ್ಲದೆ, ಸದ್ಯ ಊರು ಬಿಟ್ಟಿದ್ದಾನೆ. “ನಾನೀಗ ವಂಚನೆಗೊಳಗಾಗಿದ್ದೇನೆ. ನನಗೀಗ ನ್ಯಾಯ ಬೇಕು ಮತ್ತು ಭೂಶಿಗೆ ಶಿಕ್ಷೆಯಾಗಬೇಕು” ಎಂದು ದತ್ತಾತ್ರೇಯ ಸ್ವಾಮಿ ಮಾಧ್ಯಮದೊಂದಿಗೆ ಹೇಳಿದರು.