ಸೆಕ್ಯೂರಿಟಿ ಗಾರ್ಡ್ ಮೇಲೆ ಮೂವರಿಂದ ತೀವ್ರ ಹಲ್ಲೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಬಳಿಯಿರುವ ಶಾಂಭವಿ ಹೊಟೇಲ್ ಸೆಕ್ಯೂರಿಟಿ ಗಾರ್ಡಿಗೆ ಹೊಟೇಲಿನ ನೆಲ ಅಂತಸ್ತಿನಲ್ಲಿ ಮೂವರು ಮಾರಣಾಂತಿಕ ಹಲ್ಲೆ ನಡೆಸಿದರೆನ್ನಲಾಗಿದೆ.

ಹೊಟೇಲಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಸುರೇಶ ಖಡ್ಗ ಬಹಾದ್ದೂರ್ (32) ಮಾರಣಾಂತಿಕ ಹಲ್ಲೆಗೊಳಗಾಗಿ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಾರ್ಪ್ ಫೈನಾನ್ಸ್ ಮಾಲಕ ಸುಕೇಶ್ ರಾವ್ ಹಾಗೂ ಆತನ ಸಹಚರಿಬ್ಬರು ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳು.

ಸುರೇಶನು ಕರ್ತವ್ಯದಲ್ಲಿದ್ದ ವೇಳೆ ಆರೋಪಿ ಸುಕೇಶನು ಫೈನಾನ್ಸ್ ಎದುರುಗಡೆಯಿರುವ ಕಸವನ್ನು ತೆಗೆಯುವಂತೆ ಹೇಳಿದ್ದು, ಅದಕ್ಕೆ ಸುರೇಶನು “ಅದು ನನ್ನ ಕೆಲಸವಲ್ಲ, ನಾನು ತೆಗೆಯುವುದಿಲ್ಲ” ಎಂದು ಹೇಳಿ ಹೊಟೇಲಿನ ರಿಸೆಪ್ಷನ್ ಮೆಟ್ಟಲಿನ ಹತ್ತಿರ ಬಂದಿದ್ದಾನೆ. ಆ ವೇಳೆ ಆರೋಪಿ ಸುಕೇಶ್ ಮತ್ತು ಇನ್ನಿಬ್ಬರು ಸಹಿತ ಮೂವರು ಸೇರಿಕೊಂಡು ಸುರೇಶಗೆ ಹೊಟ್ಟೆಗೆ ತುಳಿದು ಮಾರಣಾಂತಿಕ ಹಲ್ಲೆ ನಡೆಸಿದ್ದು, ಹಲ್ಲೆಯಿಂದ ಸುರೇಶ್ ಬಿದ್ದಿದ್ದಾರೆ.

ಸುರೇಶ್ ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.