ದೀಪಾವಳಿಗೆ ಬಿಗ್ ಫೈಟ್

ಈ ವರ್ಷ ದೀಪಾವಳಿಯಂದು ಹೊರಗಷ್ಟೇ ಪಟಾಕಿ ಸದ್ದು ಕೇಳಿಸುವುದಲ್ಲ. ಬದಲಾಗಿ ಬಾಕ್ಸಾಫೀಸಿನಲ್ಲೂ ಭಾರೀ ಧಮಾಕಾಧಾರ್ ಸೌಂಡ್ ಕೇಳಿಬರಲಿದೆ. ಮೂರು ಮೂರು ಬಿಗ್ ಬ್ಯಾಂಗ್ ಚಿತ್ರಗಳು ಆ ದಿನ ರಿಲೀಸ್ ಆಗಲಿವೆ.

ಮಹಾನ್ ನಟರು ದೀಪಾವಳಿ ಸಂದರ್ಭದಲ್ಲಿ ಬಾಕ್ಸಾಫೀಸಿನಲ್ಲಿ ಎದುರುಬದುರಾಗಲಿದ್ದಾರೆ. ಆಮೀರ್ ಖಾನ್ `ಸೀಕ್ರೆಟ್ ಸೂಪರ್ಸ್ಟಾರ್’ ಹಾಗೂ ರಜನೀಕಾಂತ್ ಹಾಗೂ ಅಕ್ಷಯ್ ಕುಮಾರ್ ಅಭಿನಯದ ಸೂಪರ್ ಹೀರೋ ಸಿನಿಮಾ `2.0′ ಎರಡೂ ಸಿನಿಮಾ ಈ ವರ್ಷ ದೀಪಾವಳಿಯಂದು ರಿಲೀಸ್ ಆಗುತ್ತಿವೆ. ಈ ಚಿತ್ರಗಳಲ್ಲದೇ ರೋಹಿತ್ ಶೆಟ್ಟಿಯ ಅಜಯ್ ದೇವಗನ್ ಅಭಿನಯದ `ಗೋಲ್ಮಾಲ್ 4′ ಕೂಡಾ ಅದೇ ಸಮಯದಲ್ಲಿ ರಿಲೀಸ್ ಆಗುವ ನಿರೀಕ್ಷೆ ಇದೆ.

ಆಮೀರ್ `ಸೀಕ್ರೆಟ್ ಸೂಪರ್ಸ್ಟಾರ್’ ಈ ಮೊದಲು ಅಗಸ್ಟ್ ಮೊದಲ ವಾರ ಬಿಡುಗಡೆಯಾಗುತ್ತದೆ ಎನ್ನಲಾಗಿತ್ತು. ಆದರೆ ಶಾರೂಕ್ ಖಾನ್ ಅನಷ್ಕಾ ಶರ್ಮಾ ಜೊತೆಗಿನ ಇನ್ನೂ ಹೆಸರಿಡದ ಚಿತ್ರ ಹಾಗೂ ಅಕ್ಷಯ್ ಕುಮಾರ್ `ಟಾಯ್ಲೆಟ್ ಏಕ್ ಪ್ರೇಮ್ ಕಥಾ’ ಚಿತ್ರಗಳು ಅದೇ ಸಮಯದಲ್ಲಿ ರಿಲೀಸ್ ಆಗುತ್ತಿರುವುದರಿಂದ ಆಮೀರ್ ತನ್ನ ಸಿನಿಮಾವನ್ನು ದೀಪಾವಳಿಗೆ ಮುಂದೂಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ರಜನಿ ಜೊತೆ ಮಾತಾಡಿಯೇ ಆಮೀರ್ ಈ ನಿರ್ಧಾರಕ್ಕೆ ಬಂದಿದ್ದಾನೆಯಂತೆ. ರಜನಿ ಮಹತ್ವಾಕಾಂಕ್ಷಿ ಚಿತ್ರ `2.0′ ಬಹಳ ದೊಡ್ಡ ಬಜೆಟ್ಟಿನಲ್ಲಿ ತಯಾರಾಗುತ್ತಿದ್ದರೆ ಆಮೀರ್ `ಸೂಪರ್ಸ್ಟಾರ್’ ಚಿತ್ರದಲ್ಲಿ ಬರೀ ನಟ ಮಾತ್ರವಲ್ಲ, ಪತ್ನಿ ಕಿರಣ್ ರಾವ್ ಹಾಗೂ ಆಮೀರ್ ಈ ಸಿನಿಮಾದ ನಿರ್ಮಾಪರು ಕೂಡಾ. ಈ ಎರಡೂ ಚಿತ್ರಗಳೂ ದೀಪಾವಳಿ ಸಮಯದಲ್ಲಿ ಬಾಕ್ಸಾಫೀಸಿನಲ್ಲಿ ದೊಡ್ಡ ಮಟ್ಟದಲ್ಲಿ ಧೂಮ್ ಮಚಾಯಿಸಲಿದೆ ಎನ್ನುವುದು ಸಿನಿಮಾಪಂಡಿತರ ಅಂಬೋಣ. ಜೊತೆಗೇ ಈ ಕಡೆ ರೋಹಿತ್ ಶೆಟ್ಟಿಯ `ಗೋಲ್ಮಾಲ್’ ಸಹ ಸೇರಿಬಿಟ್ಟರೆ ದೀಪಾವಳಿಯ ದಿನ ಪಟಾಕಿ ಸೌಂಡ್ ಥಿಯೇಟರಿನಲ್ಲೂ ಮಾರ್ದನಿಗೊಳ್ಳಬಹುದು.