ವಧುಕ್ಷಾಮದ ಪರಿಹಾರಕ್ಕಾಗಿ ಉತ್ತರ ಭಾರತದ ಸಂಬಂಧ ಬೆಸೆಯುವ ಕಾರ್ಯ

ಹವ್ಯಕ ವರರಿಗೆ ಉ ಪ್ರ ಕನ್ಯೆಯರ ಮದುವೆ ಅಭಿಯಾನ

ನಮ್ಮ ಪ್ರತಿನಿಧಿ ವರದಿ

ಯಲ್ಲಾಪುರ : “ದಕ್ಷಿಣ ಭಾರತದಲ್ಲಿ ಅಧಿಕವಾಗಿರುವ ವಧುಕ್ಷಾಮದ ಪರಿಹಾರಕ್ಕಾಗಿ ಉತ್ತರದ ಭಾರತದ ಸಂಬಂಧ ಬೆಸೆಯುವ ಮಹತ್ವದ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ” ಎಂದು ಸ್ವರ್ಣವಲ್ಲಿ ಮಠದ ಸಪ್ತಪದಿ ಸಂಸ್ಥೆಯ ಸಂಚಾಲಕ ವೆಂಕಟರಮಣ ಬೆಳ್ಳಿ ಹೇಳಿದರು.

ಅವರು ಶನಿವಾರ ಉತ್ತರ ಭಾರತದ ವಾರಣಾಸಿಯ ಸಾಕ್ಷಿ ಗಣಪತಿ ಮಂದಿರದಲ್ಲಿ ಸುಶೀಲಾ ಮತ್ತು ಗಣೇಶ ತಿವಾರಿಯವರ ಪುತ್ರಿ ಶ್ವೇತಾ ಹಾಗೂ ಶಿರಸಿಯ ಶ್ರೀಮತಿ ಮತ್ತು ಮಹಾಬಲೇಶ್ವರ ಭಟ್ಟ ಕಕ್ಕೋಡ ಇವರ ಪುತ್ರ ಸುರೇಶರ ಧಾರ್ಮಿಕ ಪದ್ಧತಿಯಂತೆ ನಡೆದ ವೈವಾಹಿಕ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

“ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಅನೇಕ ವರ್ಷಗಳಿಂದ ಭ್ರೂಣಹತ್ಯೆ ನಿರ್ಮೂಲನೆ ಮತ್ತು ವ್ಯಸನಮುಕ್ತ ಸಮಾಜ ನಿರ್ಮಿಸುವಲ್ಲಿ ಅಭಿಯಾನವನ್ನೇ ಹಮ್ಮಿಕೊಂಡು ನಾಡಿನಾದ್ಯಂತ ಕಾರ್ಯೋನ್ಮುಖರಾಗಿದ್ದಾರೆ. ಅವುಗಳ ಜೊತೆಯಲ್ಲಿ ಈ ಪ್ರದೇಶದಲ್ಲಿ ಬ್ರಾಹ್ಮಣರಿಗೆ ಕನ್ಯೆ ದೊರೆಯದೇ ಭವಿಷ್ಯತ್ತಿನಲ್ಲಿ ವಂಶ ಬೆಳೆಯದೇ ಹೋದಿತು ಎಂಬುದನ್ನು ಅರಿತು ಉತ್ತರ ಭಾರತದ ಬ್ರಾಹ್ಮಣರ ಸಂಪರ್ಕ ಮಾಡಲು ಸಪ್ತಪದಿ ಸಂಸ್ಥೆಯನ್ನು ಸ್ಥಾಪಿಸಿ, ಸಮ್ಮೆಲ್ಲ ಸಂಘಟನೆಗೆ ಮಾರ್ಗದರ್ಶಕರಾಗಿ, ಬೆನ್ನೆಲುಬಾಗಿ ನಿಂತಿದ್ದಾರೆ. ಶ್ರೀಗಳ ಇಚ್ಚೆಯಂತೆ ಭಾರತದ 4 ದಿಕ್ಕಿನಲ್ಲಿರುವ ಜನರನ್ನು ಏಕತ್ರಗೊಳಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಇಂದು ನಡೆದ ವಿವಾಹವನ್ನು ಗಂಗಾ ಕಾವೇರಿ ಸಂಗಮ ಎಂದು ಕರೆಯಬಹುದು. ಇದು ಸಂಘಟನೆಯ ಮಹತ್ವದ ಹೆಜ್ಜೆಯಾಗಿದ್ದು, ಶ್ರೀಗಳ ಮಾರ್ಗದರ್ಶನದಂತೆ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇವೆ. ಈವರೆಗೆ ಉತ್ತರ ಭಾರತದ 5 ಮಂದಿ ಕನ್ಯೆಯರನ್ನು ನಮ್ಮ ಪ್ರದೇಶಕ್ಕೆ ತಂದು ವೈವಾಹಿಕ ಕಾರ್ಯ ನೆರವೇರಿಸಲಾಗಿದೆ. ಇಂದು ದಕ್ಷಿಣ ಭಾರತದ ಯುವಕ ಸುರೇಶ, ವಿಶ್ವನಾಥನ ಸನ್ನಿಧಾನದಲ್ಲಿ ವಿವಾಹ ವಾಗುತ್ತಿರುವುದು ಅರ್ಥಪೂರ್ಣವಾಗಿದೆ” ಎಂದರು.

ಉತ್ತರ ಭಾರತದ ಬ್ರಾಹ್ಮಣ ಸಂಘಟನಾ ಪ್ರಮುಖ ತ್ರಿಲೋಕನಾಥ ದ್ವಿವೇದಿ ಮಾತನಾಡಿ, “ನಾವು ಕ್ಷೇತ್ರವಾದದಿಂದ ಹೊರಬಂದರೆ, ನಮ್ಮೆಲ್ಲ ಸಮಸ್ಯೆಗಳಿಗೆ ಸುಲಭ ಪರಿಹಾರ ಸಾಧ್ಯ. ನಾವು ಮಾಡುತ್ತಿರುವ ಕಾರ್ಯ ಕೂಡಾ ರಾಷ್ಟ್ರ ನಿರ್ಮಾಣದಲ್ಲಿ ಅತಿ ಮಹತ್ವದ ಹೆಜ್ಜೆಯಾಗಿದೆ. ಪ್ರತಿಯೊಬ್ಬರೂ ನಮ್ಮ ಈ ಸಂಘಟನೆಯೊಂದಿಗೆ ಕೈಜೋಡಿಸಿ, ನೆರವು ನೀಡುವ ಅನಿವಾರ್ಯತೆ ಇದೆ;; ಎಂದರು.

ಸಪ್ತಪದಿ ಸಂಸ್ಥೆಯ ಕಾರ್ಯನಿರ್ವಾಹಕ ಮುಖ್ಯಸ್ಥರಾದ ನಾರಾಯಣ ಹೆಗಡೆ ಗಡಿಕೈ, ಮಹಾಬಲೇಶ್ವರ ಭಟ್ಟ ಕಕ್ಕೋಡ, ಶ್ರೀಧರ ಭಟ್ಟ ಚವತ್ತಿ, ಶ್ರೀನಿವಾಸ ಗಾಂವ್ಕರ ಯಲ್ಲಾಪುರ, ಉತ್ತರ ಭಾರತದ ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಜೇಂದ್ರಪ್ರಸಾದ ತಿವಾರಿ, ಬನಾರಸ್ಸಿನ ಓಂಪ್ರಕಾಶ ತಿವಾರಿ, ಸುನೀಲ ತಿವಾರಿ, ಪ್ರಶಾಂತ ಬಿಡತರೆ ಉಪಸ್ಥಿತರಿದ್ದರು.