ಡಿ 8ರಂದು ಮಂಗಳೂರು ಕಡಲ ಕಿನಾರೆಗೆ ಬರಲಿದೆ ಸೀಹಾಕ್ಸ್ ತಂಡ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಆರು ಮಂದಿ ಸೀಹಾಕ್ಸ್ ತಂಡವು ಮುಂಬಯಿ ಭಯೋತ್ಪಾದಕ ದಾಳಿಯಲ್ಲಿ ಅಸುನೀಗಿದವರ ಆತ್ಮಕ್ಕೆ ಗೌರವ ಅರ್ಪಿಸುವ ಮತ್ತು ಆ ಪ್ರಕ್ರಿಯೆಯಲ್ಲಿ 1,000 ಕಿ ಮೀ ಅಂತರದ ಈಜು ಪೂರೈಸಿ ವಿಶ್ವ ದಾಖಲೆ ಸ್ಥಾಪಿಸುವ ನಿಟ್ಟಿನಲ್ಲಿ ಡಿಸೆಂಬರ್ 8ರಂದು ಮಂಗಳೂರಿನ ಬಂದರಿಗೆ ಬಂದಿಳಿಯುವ ನಿರೀಕ್ಷೆ ಇದೆ.

ಪಶ್ಚಿಮ ಕರಾವಳಿಯ ಫ್ರೀ ಸ್ಟೈಲಿಂಗ್ ಜೊತೆಯಲ್ಲಿ 1000 ಅಂತರ ಈಜುವ ಗುರಿಯನ್ನು ಇಟ್ಟುಕೊಂಡಿರುವ ಈ ತಂಡ ಪ್ರಸಕ್ತ ಇರುವ ಮುಕ್ತ ಜಲ ರಿಲೇ ಈಜಿನ ದಾಖಲೆಯನ್ನು ಮುರಿಯಲು ನಿರ್ಧರಿಸಿದೆ. ಪ್ರಸಕ್ತ ಗಿನ್ನೆಸ್ ಪುಸ್ತಕದಲ್ಲಿ 2009ರಲ್ಲಿ 200 ಮಂದಿ ಈಜುಗಾರರು ಉತ್ತರ ಐರ್ಲ್ಯಾಂಡಿನ ಕ್ಯಾಮ್ಲಾಗಿ ಲೇಕಿನಲ್ಲಿ 684.75 ಕಿ ಮೀ ಕ್ರಮಿಸಿದ ದಾಖಲೆಯಿದ್ದು, ಈ ದಾಖಲೆಯನ್ನು ಮುರಿಯುವ ಗುರಿಯಲ್ಲಿ ತಂಡ ಸನ್ನದ್ಧವಾಗಿದೆ.

ಗಿನ್ನೆಸ್ ದಾಖಲೆ ಗುರಿಯೊಂದಿಗೆ ನವೆಂಬರ್ 26ರಂದು ನಡೆದ ಮುಂಬಯಿ ದಾಳಿಯಲ್ಲಿ ಜೀವತೆತ್ತ 166 ಮಂದಿಗೆ ಗೌರವಾರ್ಪಣೆ ಸಲ್ಲಿಸುವ ಉದ್ದೇಶವನ್ನೂ ತಂಡ ಹೊಂದಿದೆ.

ಈ ತಂಡದಲ್ಲಿ ವಿಂಗ್ ಕಮಾಂಡರ್ ಪರಮವೀರ್ ಸಿಂಗ್, ವಾಯು ಯೋಧ ವಿಕ್ಕಿ ಟೋಕಸ್, ರಿಟೈರ್ಡ್ ಸರ್ಜೆಂಟ್ ಜಿ ನರಹರಿ, ಮುಂಬಯಿ ಸಹಾಯಕ ಪೊಲೀಸ್ ಇನಸ್ಪೆಕ್ಟರ್ ಶ್ರೀಕಾಂತ್ ಪಲಂಡೆ, ಮಹಾರಾಷ್ಟ್ರ ರಾಜ್ಯ ಈಜುಗಾರರ ತಂಡದ ಕೋಚ್ ರಾಹುಲ್ ಚಿಪ್ಲುಣ್ಕರ್ ಮತ್ತು 16 ವರ್ಷದ ವಿದ್ಯಾರ್ಥಿ ಮಾನವ್ ಮೆಹ್ತಾ ಈ ಸಾಹಸ ಪ್ರದರ್ಶಿಸಲಿದ್ದಾರೆ.

ತಂಡದ ಯೋಜನೆಯ ಪ್ರಕಾರ ಒಬ್ಬ ಸದಸ್ಯ ಒಂದು ಗಂಟೆ ಈಜಿದ ಬಳಿಕ ಇನ್ನೊಬ್ಬ ಸದಸ್ಯ ಮತ್ತೊಂದು ಗಂಟೆ ಈಜನ್ನು ಮುಂದುವರಿಸುತ್ತಾರೆ. ಈ ರೀತಿಯಲ್ಲಿ ಪ್ರತಿಯೊಬ್ಬ ಸದಸ್ಯ ಒಂದು ಗಂಟೆ ಈಜುತ್ತಾರೆ. ಉಳಿದ ಐದು ಗಂಟೆಗಳನ್ನು ಅವರ ನಿರ್ಧಿಷ್ಟ ಸ್ಥಳ ತಲುಪುವವರೆಗೆ ಈಜುತ್ತಾರೆ.

ಈಜುಗಾರರ ತಂಡದೊಂದಿಗೆ ಬೋಟುಗಳು ಚಲಿಸಲಿವೆ. ಅದರಲ್ಲಿ ಆಹಾರ, ಪ್ರಥಮ ಚಿಕಿತ್ಸೆ ಮತ್ತು ಭಾರತೀಯ ಈಜುಗಾರಿಕೆ ಒಕ್ಕೂಟದ ಪರಿವೀಕ್ಷಕರಾದ ಶೇಖರ್ ಕಳೆ ಮತ್ತು ಸುಭೋಧ್ ಇರಲಿದ್ದಾರೆ.