ಕಾಪು ಬೀಚಿಗೆ ಬಂತು ಸ್ಕೂಬಾ ಡೈವಿಂಗ್

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಕಾಪುವಿನ ಕಡಲ ತೀರಕ್ಕೆ ಭೇಟಿ ನೀಡುವವರಿಗೆ ಇನ್ನೊಂದು ಪ್ರಮುಖ ಆಕರ್ಷಣೆಯಾಗಿರುವ ಸ್ಕೂಬಾ ಡೈವಿಂಗ್ ಸೌಲಭ್ಯವನ್ನು ಭಾನುವಾರ ಉದ್ಘಾಟಿಸಲಾಗಿದೆ. ಉಡುಪಿ ಜಿಲ್ಲಾಡಳಿತ ದೇಶದ ಪ್ರಮುಖ ಸ್ಕೂಬಾ ಡೈವಿಂಗ್ ಸಂಸ್ಥೆ ವೆಸ್ಟ್ ಕೋಸ್ಟ್ ಅಡ್ವೆಂಚರ್ಸ್ ಸಹಯೋಗದೊಂದಿಗೆ ಈ ಸೌಲಭ್ಯವನ್ನು ಆರಂಭಿಸಿದೆ.
ಸಾಹಸ ಜಲಕ್ರೀಡಾ ಪ್ರೇಮಿಗಳಿಗೆ ಈ ಸ್ಕೂಬಾ ಡೈವಿಂಗ್ ಸೌಲಭ್ಯದಿಂದ ಸಂತಸವಾಗಿದೆ. ಜಾಗತಿಕ ಗುಣಮಟ್ಟದ ಸ್ಕೂಬಾ ಡೈವಿಂಗಿಗೆ ಇಲ್ಲಿ ಅವಕಾಶವಿದೆ ಎಂದು ವೆಸ್ಟ್ ಕೋಸ್ಟ್ ಅಡ್ವೆಂಚರ್ಸ್ ಸಂಸ್ಥೆಯ ಸಿಇಒ ಹಾಗೂ ಸ್ಥಾಪಕ ಪವನ್ ಶೌರಿ ಹೇಳಿದ್ದಾರೆ.
ಕಡಲ ತೀರದಿಂದ ಸುಮಾರು 30 ನಿಮಿಷ ಪಯಣದ ನಂತರ ತಲುಪಬಹುದಾದ ಹಾಗೂ ಸ್ಕೂಬಾ ಡೈವಿಂಗ್ ವ್ಯವಸ್ಥೆಯಿರುವ ದ್ವೀಪವೊಂದಕ್ಕೆ ಆಸಕ್ತರನ್ನು ದೋಣಿಯೊಂದರಲ್ಲಿ ಕರೆದೊಯ್ಯಲಾಗುವುದು. ನುರಿತ ತರಬೇತುದಾರರು ಅಲ್ಲಿರಲಿದ್ದು, ಸ್ಕೂಬಾ ಡೈವಿಂಗಿಗೆ ಆರಂಭಿಕ ದರ ರೂ 3,500 ಎಂದು ನಿಗದಿ ಪಡಿಸಲಾಗಿದೆ ಎಂದು ಶೌರಿ ವಿವರಿಸಿದ್ದಾರೆ. ಸ್ಕೂಬಾ ಡೈವಿಂಗ್ ಆಸಕ್ತರ ಸುರಕ್ಷತೆಗೆ ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ. ಸ್ಕೂಬಾ ಡೈವಿಂಗಿಗೆ ಈಜು ಗೊತ್ತಿರಬೇಕೆಂಬ ನಿಯಮವೇನಿಲ್ಲ. ಹತ್ತು ವರ್ಷಕ್ಕಿಂತ ಮೇಲ್ಪಟ್ಟವರು ಸ್ಕೂಬಾ ಡೈವಿಂಗ್ ಮಾಡಬಹುದು. ವಿದ್ಯಾರ್ಥಿಗಳು ಹಾಗೂ ವಿದೇಶಿ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ದೊರಕುವ ನಿರೀಕ್ಷೆಯಿದೆ ಎಂದು ಶೌರಿ ಹೇಳಿದರು.
ಸ್ಕೂಬಾ ಡೈವಿಂಗ್ ಸೌಲಭ್ಯವನ್ನು ಕಾಪು ಶಾಸಕ ವಿನಯಕುಮಾರ್ ಸೊರಕೆ ಉದ್ಘಾಟಿಸಿದರು. ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಬಿ ಆರ್ ಈ ಸಂದರ್ಭ ಹಾಜರಿದ್ದರು.